Site icon Suddi Belthangady

ತಾಲೂಕು ಮಟ್ಟದ ಪಂಚ ಗ್ಯಾರಂಟಿಯ ಸಭೆ

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿಯ ಆಗಸ್ಟ್ ತಿಂಗಳ ಸಭೆಯು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರ ಉಪಸ್ಥಿತಿಯಲ್ಲಿ ಸಮಿತಿಯ ಕಛೇರಿಯಲ್ಲಿ ನಡೆಯಿತು.

ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.

ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು, ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2025ರ ಜುಲೈ ತಿಂಗಳಲ್ಲಿ 25524 ಕುಟುಂಬಗಳಿಗೆ 1,33,12,932/- ರೂ, ಬೆಳ್ತಂಗಡಿ ಉಪವಿಭಾಗದಲ್ಲಿ 2025ರ ಜುಲೈ ತಿಂಗಳಲ್ಲಿ 44407 ಕುಟುಂಬಗಳಿಗೆ 2,53,06,917/-ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ 202,89,599/- ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಪ್ರಕೃತ 58792 ಫಲಾನುಭವಿಗಳಿದ್ದು, ಆಗಸ್ಟ್-2023‌ ರಿಂದ ಈವರೆಗೆ 227,28,44,000/-ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಅನ್ನ ಭಾಗ್ಯ ಯೋಜನೆಯಡಿ ಜುಲೈ ತಿಂಗಳಲ್ಲಿ 49303 ಪಡಿತರ ಚೀಟಿದಾರರಿಗೆ 9922 ಕ್ವಿಂಟಾಲ್‌ ಅಕ್ಕಿಯನ್ನು ವಿತರಿಸಲಾಗಿದೆ. ಪ್ರತೀ ಕೆ.ಜಿ.ಗೆ ರೂಪಾಯಿ 34.00 ರಂತೆ 55,49,55,540.00ರೂ.ಗಳ ಅನುದಾನವು ಆಗಸ್ಟ್-2023‌ ರಿಂದ ಈವರೆಗೆ ತಾಲೂಕಿನ ಪಡಿತರ ಚೀಟಿದಾರರಿಗೆ ದೊರೆತಿರುವುದಾಗಿ ಅಧಿಕಾರಿಗಳು ಸಭೆಗೆ ವಿವರ ನೀಡಿದರು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6072 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 815 ಅಭ್ಯರ್ಥಿಗಳಿಗೆ 2025ರ ಮೇ ತಿಂಗಳಲ್ಲಿ 22,81,500.00ರೂ.ಗಳನ್ನು ಸಹಾಯ ಧನವನ್ನು ಡಿ.ಬಿ.ಟಿ ಮೂಲಕ ವಿತರಿಸಲಾಗಿದ್ದು, ಆಗಸ್ಟ್-2023‌ ರಿಂದ 2025ರ ಮೇ ತಿಂಗಳವರೆಗೆ 1,65,40,500.00 ರೂ.ಗಳನ್ನು ಸರ್ಕಾರವು ಫಲಾನುಭವಿಗಳ ಖಾತೆಗೆ ಜಮಾ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ 2025ರ ಜುಲೈ ತಿಂಗಳಲ್ಲಿ 671329 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-2023‌ರಿಂದ ಈವರೆಗೆ 1,62,02,924 ಪ್ರಯಾಣಿಕರು ಪ್ರಯಾಣಿಸಿದ್ದು, 74,21,87,667/-ರೂ. ಬಿಡುಗಡೆಯಾಗಿರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರು ಮತ್ತು ನೋಡೆಲ್‌ ಅಧಿಕಾರಿಯಾದ ಹೆರಾಲ್ಡ್‌ ಸ್ವಿಕ್ವೇರಾ ಉಪಸ್ಥಿತರಿದ್ದರು.

Exit mobile version