ಬೆಳ್ತಂಗಡಿ : ‘ರಾಷ್ಟ್ರೀಯ ಸೇವಾ ಯೋಜನೆ ಬದುಕಿನಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ರೂಪಿಸುವಂತಹುದು. ಅಲ್ಲಿ ಸಿಗುವ ತರಬೇತಿ ಮತ್ತು ಜೀವನ ಶಿಕ್ಷಣ ಬೇರೆ ಕಡೆ ಸಿಗಲಾರದು’ ಎಂದು ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಹೇಳಿದರು .ಅವರು ಆ. 22ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ 2024 – 25 ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಸವಾಲುಗಳು ತುಂಬಿರುವ ಈ ಸಂಕೀರ್ಣ ಯುಗದಲ್ಲಿ ನಾವು ನಾವಾಗಿರುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ. ಬದುಕಿನಲ್ಲಿ ಏನೇ ಬಂದರೂ ಅದನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬ ಪ್ರಯತ್ನದ ಛಲವನ್ನು ಎನ್.ಎಸ್.ಎಸ್. ಕಲಿಸಿಕೊಡುತ್ತದೆ. ಹಾಗಾಗಿ ಪ್ರತಿ ವಿದ್ಯಾರ್ಥಿಯೂ ಅದರಲ್ಲಿ ಭಾಗವಹಿಸಿ ತನ್ನನ್ನು ತಾನು ಸಮಾಜಮುಖಿಯಾಗಿ ಬೆಳೆಸಿಕೊಳ್ಳಬೇಕು’ ಎಂದರು. ಯುವ ಸಾಹಿತಿ ಹಾಗೂ ತರಬೇತುದಾರ ಚಂದ್ರಹಾಸ ಬಳಂಜ ಮಾತನಾಡಿ, ‘ ನಮ್ಮಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಸಿಕ್ಕ ಒಳ್ಳೆಯ ಅವಕಾಶಗಳನ್ನು ಕೈ ಚೆಲ್ಲುವ ಗುಣವೂ ಇರಬಾರದು. ತನ್ನೊಳಗಿನ ಕೀಳರಿಮೆಯನ್ನು ದೂರ ಮಾಡಿ ಅವಕಾಶಗಳನ್ನು ಹೇಗೆ ಪಡೆಯಬೇಕು ಎಂಬುದನ್ನು ಎನ್.ಎಸ್.ಎಸ್. ಸದಾ ಕಲಿಸಿಕೊಡುತ್ತದೆ. ಹಾಗಾಗಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಸತ್ಪ್ರಜೆಯಾಗಿ ಬಾಳಬೇಕು’ ಎಂದು ತಿಳಿಸಿ ಅನೇಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.
ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎ. ಶಮೀವುಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವೇದಿಕೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ನಾಯಕ ದ್ವಿತೀಯ ಕಲಾ ವಿಭಾಗದ ಮಹಮ್ಮದ್ ಜುನೈದ್, ನಾಯಕಿ ದ್ವಿತೀಯ ವಿಜ್ಞಾನ ವಿಭಾಗದ ಸಂಧ್ಯಾ ಇದ್ದರು.
ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಗಣೇಶ್ ಬಿ. ಶಿರ್ಲಾಲು ಪ್ರಸ್ತಾವಿಸಿ ಸ್ವಾಗತಿಸಿದರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸೌಜನ್ಯ, ಸಹ ಯೋಜನಾಧಿಕಾರಿ ಚಂದನ ಅತಿಥಿಗಳನ್ನು ಪರಿಚಯಿಸಿದರು. ಎನ್.ಎಸ್.ಎಸ್.ವಿದ್ಯಾರ್ಥಿ ದೀಪಕ್ ಕಾರ್ಯಕ್ರಮ ನಿರೂಪಿಸಿದರು. ಸಹ ಯೋಜನಾಧಿಕಾರಿ ಸುಷ್ಮಾ ವಂದಿಸಿದರು.