Site icon Suddi Belthangady

ಮಹೇಶ್ ಶೆಟ್ಟಿ ತಿಮರೋಡಿಯ ದಸ್ತಗಿರಿಗೆ ತಡೆ- ಅಕ್ರಮ ಕೂಟ ಸೇರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ-ಬ್ರಹ್ಮಾವರ ಪೊಲೀಸರಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು- ಮಟ್ಟಣ್ಣನವರ್, ಜಯಂತ್ ಟಿ. ಸೇರಿದಂತೆ 15 ಜನರ ವಿರುದ್ಧ ದೂರು ದಾಖಲು

ಬೆಳ್ತಂಗಡಿ: ಬ್ರಹ್ಮಾವರ ಠಾಣಾ ಉಪನಿರೀಕ್ಷಕರನ್ನು ಒಳಗೊಂಡಿದ್ದ ಪೊಲೀಸರು ಆಗಸ್ಟ್ 21ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ದಸ್ತಗಿರಿಗಾಗಿ ಉಜಿರೆಯ ತಿಮರೋಡಿಗೆ ಆಗಮಿಸಿದಾಗ ದಸ್ತಗಿರಿ ಮಾಡಲು ಬಿಡದೆ, ಅಕ್ರಮ ಕೂಟ ಸೇರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಗಿರೀಶ್ ಮಟ್ಟಣ್ಣನವರ್,ಜಯಂತ್ ಟಿ ಸೇರಿದಂತೆ ಹಲವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಎಸ್ ಪಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು‌ಆ ಪ್ರಕಾರ “ಬ್ರಹ್ಮಾವರ ಪೊಲೀಸ್ ಠಾಣಾ ಅ.ಕ್ರ. 177/2025, ಕಲಂ 196(1) (ಎ) ಬಿಎನ್‌ಎಸ್ ಪ್ರಕರಣದ ತನಿಖಾಧಿಕಾರಿಯಾಗಿರುವ, ಸದ್ರಿ ಠಾಣಾ ಪೊಲೀಸ್ ಉಪ-ನಿರೀಕ್ಷಕರು (ಕಾನೂನು & ಸುವ್ಯವಸ್ಥೆ) ರವರು, ಸದ್ರಿ ಪ್ರಕರಣದಲ್ಲಿ ಆಪಾದಿತನಾದ ಮಹೇಶ್ ಶೆಟ್ಟಿ ತಿಮರೋಡಿ ಎಂಬಾತನು ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಅಪಾದಿನನ್ನು ದಸ್ತಗಿರಿ ಮಾಡುವುದಕ್ಕಾಗಿ, ಇಲಾಖಾ ಮೇಲಾಧಿಕಾರಿಯವರೊಂದಿಗೆ ಹಾಗೂ ಸಿಬ್ಬಂದಿಗಳೊಂದಿಗೆ ದಿನಾಂಕ: 21-08-2025ರಂದು ಬೆಳಿಗ್ಗೆ, ಅಪಾದಿತನ ಮನೆಯಾದ ಬೆಳ್ತಂಗಡಿ, ಉಜಿರೆ ಗ್ರಾಮದ ತಿಮರೋಡಿ ಹೌಸ್ ಎಂಬಲ್ಲಿಗೆ ತೆರಳಿದಾಗ, ಆಪಾದಿತನ ಮನೆಯಲ್ಲಿದ್ದ ಗಿರೀಶ್ ಮಟ್ಟಣ್ಣವ‌ರ್, ಜಯಂತ್ ಎಂಬವರುಗಳು ಹಾಗೂ ಇತರ 7 ರಿಂದ 10 ಜನರು ಆಪಾದಿತನನ್ನು ದಸ್ತಗಿರಿ ಮಾಡಲು ತಡೆಯೊಡ್ಡಿ, ಸ್ಥಳಕ್ಕೆ ಹೆಚ್ಚಿನ ಜನರನ್ನು ಅಕ್ರಮಕೂಟವಾಗಿ ಸೇರಿಸಿ, ಇಲಾಖಾ ಕರ್ತವ್ಯ ನಿರ್ವಹಿಸದಂತೆ ಬಲಪ್ರಯೋಗ ನಡೆಸಿ ಅಡ್ಡಿಪಡಿಸಿರುತ್ತಾರೆ. ಮುಂದುವರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರವಾಗಿ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾರೆ.

ಪ್ರಕರಣದ ಅಪಾದಿತ ಮಹೇಶ್ ಶೆಟ್ಟಿಯನ್ನು ದಸ್ತಗಿರಿ ಮಾಡಿದ ಬಳಿಕ, ಅಪಾದಿತನು ಇಲಾಖಾ ಜೀಪಿನಲ್ಲಿ ಬರಲು ನಿರಾಕರಿಸಿ, ಆತನ ಖಾಸಗಿ ಕಾರಿನಲ್ಲಿ ಬಂದಿದ್ದು, ಆ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು, ಸುಮಾರು 10 ರಿಂದ 15 ಕಾರುಗಳನ್ನು ಹಿಂಬಾಲಿಸಿಕೊಂಡು ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ , ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 94/2025, ಕಲಂ: 132,189(2),351(2), 263(a),190,262 BNS – 2023 ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ತಿಳಿಸಿದ್ದಾರೆ.

Exit mobile version