ಬೆಳಾಲು: ಬೆಳ್ತಂಗಡಿ ಶಾಲಾ ಶಿಕ್ಷಣ ಇಲಾಖೆ ಮತ್ತು ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಹಳೆಪೇಟೆ ಉಜಿರೆ, ಮುಂಡಾಜೆ ಹಾಗೂ ಅಣಿಯೂರು ಕ್ಲಸ್ಟರ್ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಆ.22ರಂದು ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ನೇರವೇರಿಸಿ ಮಾತನಾಡಿ ಕಬಡ್ಡಿ ಪ್ರಾಚೀನ ಗ್ರಾಮೀಣ ಕ್ರೀಡೆಯಾಗಿದ್ದು ಇದು ಒಗ್ಗಟ್ಟು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುತ್ತದೆ. ದೈಹಿಕ ಶಿಕ್ಷಣಕ್ಕೆ ಶಿಕ್ಷಕರು ಇಲ್ಲದ ಮಾಯ ಶಾಲೆಯಲ್ಲಿ ಉತ್ತಮ ವ್ಯವಸ್ಥೆಯೊಂದಿಗೆ ಈ ಭಾಗದ ಕ್ರೀಡಾ ಅಭಿಮಾನಿಗಳ ಸಹಕಾರದಿಂದ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪ್ರಗತಿಪರ ಕೃಷಿಕ ಸಂಜೀವ ಗೌಡ ಕನಿಕ್ಕಿಲ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿಲ್ಪಿ ಶಶಿಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುರೇಂದ್ರ ಗೌಡ, ಜಯಂತಿ, ಪ್ರೇಮಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಪೆಲತ್ತಡಿ, ಶಿಕ್ಷಣ ಸಂಯೋಜಕರಾದ ಸಿದ್ದಲಿಂಗ ಸ್ವಾಮಿ, ಚೇತನಾಕ್ಷಿ, ಸಮೂಹ ಸಂಪಲ್ಮನ ವ್ಯಕ್ತಿ ಪ್ರತಿಮಾ, ಬದನಾಜೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಸಂಘಟಕ ಗಿರೀಶ್, ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಎಸ್.ಡಿ.ಎಂ.ಸಿ ಸದಸ್ಯರು, ಹೆತ್ತವರು, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದು ಸಹಕರಿಸಿದರು. ನಂತರ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು. ಮುಖ್ಯೋಪಾಧ್ಯಾಯ ವಿಠಲ ಎಂ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ಯೋಗೀಶ್ ಹೆಚ್. ಆರ್. ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.