ಬೆಳ್ತಂಗಡಿ: ‘ಕ್ರೀಡೆ ಮನಸ್ಸು ಮತ್ತು ದೇಹಕ್ಕೆ ಆರೋಗ್ಯ ನೀಡುವಂತಹುದು. ಶಾಲಾ ಕಾಲೇಜಿನ ಅವಧಿಯಲ್ಲಿ ಸಿಗುವ ಕ್ರೀಡೆಯ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಬದುಕನ್ನು ಬೆಳಗಿಸಿಕೊಳ್ಳಬೇಕು’ ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ. ಹೇಳಿದರು.
ಅವರು ಆ.20ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಕ್ರೀಡಾ ಸಂಯೋಜಕ ಸಂದೀಪ್ ಕುಮಾರ್ ಶೆಟ್ಟಿ ಮಾತನಾಡಿ, ‘ ಶ್ರೀ ಗುರುದೇವ ಸಂಸ್ಥೆಯ ಸ್ಥಾಪಕರಾದ ಕೀರ್ತಿಶೇಷ ಕೆ. ವಸಂತ ಬಂಗೇರರು ಹೃದಯ ವೈಶಾಲ್ಯತೆ ಉಳ್ಳವರಾಗಿದ್ದು, ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದವರು. ಬೆಳ್ತಂಗಡಿ ತಾಲ್ಲೂಕು ಗ್ರಾಮೀಣ ಪ್ರದೇಶವಾದರೂ ಕ್ರೀಡೆ ಪ್ರತಿಭೆಗಳಿಗೆ ಸಂಪದ್ಭರಿತ ತಾಲ್ಲೂಕಾಗಿ ಬೆಳೆದು ಬಂದಿದೆ. ಅದಕ್ಕೆ ಇಲ್ಲಿರುವ ಶಾಲಾ ಕಾಲೇಜುಗಳು ಮತ್ತು ಅಲ್ಲಿ ಸಿಗುವ ತರಬೇತಿಯೇ ಕಾರಣವಾಗಿದೆ’ ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಂ. ವಸತಿ ಕಾಲೇಜಿನ ಉಪಪ್ರಾಂಶುಪಾಲ ಮನೀಶ್, ಕ್ರೀಡಾ ನಿರ್ದೇಶಕ ಲಕ್ಷ್ಮಣ್ ಗೌಡ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಕ್ರೀಡಾ ನಿರ್ದೇಶಕ ರವಿರಾಮ್ ಶೆಟ್ಟಿ, ಕ್ರೀಡಾ ಸಂಯೋಜಕಿ ಅನನ್ಯ ಇದ್ದರು.
ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಪ್ರಸ್ತಾವಿಸಿ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ನಿರೂಪಿಸಿದರು. ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಶುಭಲಕ್ಷ್ಮಿ ವಂದಿಸಿದರು.