ಗುರುವಾಯನಕೆರೆ: ದೇಶದ ರಕ್ಷಣೆಗಾಗಿ ಮತ್ತು ರಾಷ್ಟ್ರ ಹಿತಕ್ಕಾಗಿ ಭಾರತ ದೇಶದ ಸೈನಿಕರು ಮತ್ತು ಪೊಲೀಸ್ ವ್ಯವಸ್ಥೆಯು ಸದಾ ಶ್ರಮಿಸುತ್ತದೆ. ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ, ಭಯೋತ್ಪಾದನಾ ನಿಗ್ರಹ, ಶಾಂತಿ ಸಂರಕ್ಷಣೆ ಇತ್ಯಾದಿ ಸಂದರ್ಭದಲ್ಲಿ ಸ್ವಹಿತಾಸಕ್ತಿಯನ್ನು ಮರೆತು ರಾಷ್ಟ್ರೀಯ ಹಿತಕ್ಕಾಗಿ ದುಡಿಯುವ, ಸೈನಿಕರು ಮತ್ತು ಪೊಲೀಸರು ಈ ದೇಶದ ಸಂಪತ್ತು. ಐತಿಹಾಸಿಕ ವಿಜಯವನ್ನು ಸಾಧಿಸಿರುವ ನಮ್ಮ ಭಾರತೀಯ ಸೈನಿಕರು ಪ್ರಸ್ತುತ ದಿನಗಳಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರದಂತಹ ಪ್ರಮುಖ ಸಂದರ್ಭಗಳಲ್ಲಿ ತಮ್ಮ ನೈಜ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಕ್ಸೆಲ್ ಪ.ಪೂ. ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸೇವೆ ಸಲ್ಲಿಸಿ ನಿವೃತ್ತರಾಗಿರುವ 130ರಷ್ಟು ರಕ್ಷಕರನ್ನು ಸನ್ಮಾನಿಸುತ್ತಿರುವುದು ಅವರಲ್ಲಿರುವ ರಾಷ್ಟ್ರ ಪ್ರೇಮದ ಪ್ರತಿಬಿಂಬವಾಗಿದೆ. ಭಾರತೀಯ ಸೈನ್ಯಕ್ಕೆ ತಮ್ಮ ಕಿರು ಕಾಣಿಕೆಯನ್ನು ಕೊಡಬೇಕೆನ್ನುವ ಹಂಬಲದಿಂದ ಎಕ್ಸೆಲ್ ಪಿಯು ಕಾಲೇಜಿನಲ್ಲಿ NDA ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದಂತಹ ವ್ಯವಸ್ಥಿತ ತರಬೇತಿಯನ್ನು ನೀಡಲಾಗುತ್ತಿದೆ. ರಾಷ್ಟ್ರ ರಕ್ಷಣೆಯ ಕನಸನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಎಕ್ಸಲ್ ಕಾಲೇಜ್ ಒಂದು ಉತ್ತಮ ವೇದಿಕೆಯಾಗಿದೆ. ಜೈ ಜವಾನ್ ಜೈ ಕಿಸಾನ್ ಎನ್ನುವ ನುಡಿ ರೋಮಾಂಚನ ಕಾರಿಯಾದುದು. ರಕ್ಷಕರಿಗೆ ನಮನ ಎನ್ನುವ ಈ ಕಾರ್ಯಕ್ರಮವು ಎಕ್ಸೆಲ್ ಸಂಸ್ಥೆಯ ಹೃದಯ ಸ್ಪರ್ಶಿ ಕಾರ್ಯಕ್ರಮವಾಗಿದೆ” ಎಂದು ಪ್ರಾಸ್ತಾವಿಕ ನುಡಿಗಳ ಮೂಲಕ ಸರ್ವರನ್ನು ಸ್ವಾಗತಿಸಿದ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಹೇಳಿದರು.
ದೀಪ ಬೆಳಗಿಸಿ ಮಾತನಾಡಿದ ನಿವೃತ್ತ ಶಿಕ್ಷಕರು ಮತ್ತು ಖ್ಯಾತ ವಾಗ್ಮಿಗಳಾದಂತಹ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ” ವಿದ್ಯೆಯಿಂದ ವಿನಯ ಮತ್ತು ಧನಪ್ರಾಪ್ತಿಯಾಗುತ್ತದೆ. ವಿದ್ಯೆಯಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕೆ ಹೊರತು ಅಂಕಗಳಿಗಲ್ಲ. ಮಾನವನ ಮನಸ್ಸನ್ನು ಪರಿಶುದ್ಧಗೊಳಿಸುವುದೇ ವಿದ್ಯೆಯ ಮಹತ್ವವಾಗಬೇಕು. ಭಾರತೀಯ ಭಾಷೆಗಳಲ್ಲಿ ವಿಕಾಸವಾದ ಅಡಗಿದೆ. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಿರುತ್ತದೆ. ಸೊನ್ನೆಯನ್ನು ವಿಶ್ವಕ್ಕೆ ಕೊಟ್ಟ ಕೀರ್ತಿ ನಮ್ಮ ಭಾರತದ್ದು. ವಿದ್ಯೆಯಿಂದ ಸಂಸ್ಕಾರ ಗಳಿಸಿಕೊಳ್ಳಬೇಕು ” ಎಂದು ಮಕ್ಕಳಿಗೆ ತಿಳಿ ಹೇಳಿದರು.ರಕ್ಷಕರು ದೇಶದ ಬುನಾದಿ ಎಂದು ರಕ್ಷಕರ ಕಾರ್ಯವನ್ನು ಶ್ಲಾಘಿಸಿದರು.
ಭಾರತೀಯ ಭೂ ಸೇನೆಯ ವಿಶ್ರಾಂತ ಮೇಜರ್ ಜನರಲ್ ಎಂ. ವಿ.ಭಟ್ ರವರು ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಾ ” ರಕ್ಷಕರು ಕೇವಲ ದೇಶ ರಕ್ಷಕರಲ್ಲ , ದೇಶದ ಪೋಷಕರು” ಎಂದು ಹೇಳಿದರು. ಬೆಂಗಳೂರಿನ ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ನ ಸಮೂಹ ಸಂಪಾದಕ ರವಿಶಂಕರ್ ಭಟ್ ರವರು ಕಾಲೇಜಿನ ಕರಪತ್ರ ಬಿಡುಗಡೆ ಮಾಡಿ ” ರಕ್ಷಕರ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯ ಮನಸ್ಸು ಅನನ್ಯವಾದುದು” ಎಂದು ಹೇಳುತ್ತಾ ತಮ್ಮ ಜೀವನದ ಅನೇಕ ಅನುಭವಗಳನ್ನು ಮಕ್ಕಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಅಗ್ನಿಶಾಮಕ ದಳದ ಮುಖ್ಯಸ್ಥ ಬಿ.ಎಂ. ತಿರುಮಲೇಶ್ ” ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷ ವಾಕ್ಯ ಸ್ಮರಣೀಯವಾದದ್ದು. ರಕ್ಷಕರನ್ನು ಸನ್ಮಾನಿಸಿದಂತೆ ರೈತರನ್ನು ಸನ್ಮಾನಿಸುವ ವಿಶಿಷ್ಟ ಕಾರ್ಯ ಎಕ್ಸೆಲ್ ಸಂಸ್ಥೆಯಿಂದಲೇ ಪ್ರಾರಂಭವಾಗಲಿ”ಎಂದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ” ರಕ್ಷಕ ನಮನ ಎನ್ನುವ ಕಾರ್ಯಕ್ರಮ ಅತ್ಯಂತ ಸಾರ್ಥಕ ಸಮಾರಂಭ. ಇಂತಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದ ನನಗೆ ಹೃದಯ ತುಂಬಿ ಬಂದಿದೆ. ನನಗೆ ಅಹ್ವಾನ ಕೊಟ್ಟಂತಹ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಧನ್ಯವಾದಗಳು” ಎಂದು ಸಾರ್ಥಕ ಭಾವವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಮೂಡುಬಿದಿರೆಯ ಶ್ರೀ ಜೈನ ಮಠದ ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.”ಭಾರತೀಯರಾದ ನಾವು ಭಾರತೀಯ ಭಾಷೆಗಳ ಮಹತ್ವವನ್ನು ಅರಿಯಬೇಕು. ನಮ್ಮದು ಸಂಪತ್ಭರಿತ ರಾಷ್ಟ್ರ ಇಲ್ಲಿ ವಾಸಿಸುವುದೇ ಪುಣ್ಯ” ಎಂದು ಪಂಪ ಕವಿಯ ವಾಣಿಯನ್ನು ನೆನೆದರು. ನೀವೆಲ್ಲರೂ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಎಕ್ಸೆಲ್ ಕಾಲೇಜಿನಲ್ಲಿ ಓದುತ್ತಿದ್ದೀರಿ. ಇಂತಹ ಸುಂದರ ಪರಿಸರದಲ್ಲಿ ಓದುತ್ತಿರುವುದೇ ನಿಮ್ಮೆಲ್ಲರ ಅದೃಷ್ಟ. ಕವಿಗಳ, ಮಹಾತ್ಮರ ಆದರ್ಶಗಳನ್ನು ನೀವು ಓದಿ ತಿಳಿಯಬೇಕು. ನಿಮ್ಮ ಪೋಷಕರ ಪರಿಶ್ರಮವನ್ನು ಅರಿತು ಸಾಧನೆಯಲ್ಲಿ ತೊಡಗಬೇಕು.ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ಪ್ರಾಮಾಣಿಕತೆಯಿಂದ ದುಡಿದು ಬದುಕಬೇಕೆಂದು ಹೇಳಿದರಲ್ಲದೆ ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ಕರೆ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ” ವೈಯಕ್ತಿಕ ಲಾಭಕ್ಕಾಗಿ ಈ ಸಂಸ್ಥೆ ಸ್ಥಾಪಿತವಾಗಿಲ್ಲ. ನಿಸ್ವಾರ್ಥವಾಗಿ ಶೈಕ್ಷಣಿಕ ಸೇವೆ ಮಾಡಲೆಂದು ಸ್ಥಾಪಿಸಲಾಗಿದೆ. ಅನೇಕ ಸಾಧಕರು,ಆದರ್ಶ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಎರಡು ದಿನಗಳ ಕಾಲ ಏರ್ಪಡಿಸಿದ್ದ ಈ ಕಾರ್ಯಕ್ರಮ ಸಾರ್ಥಕವಾಗಿದೆ ಎನ್ನುವ ಭಾವ ನನ್ನ ಮನಸ್ಸಲ್ಲಿ ತುಂಬಿದೆ” ಎಂದರು
ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಅರೆಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯರಾದ ಡಾ. ಪ್ರಜ್ವಲ್ ಕಜೆ, ಬೋಧಕ ಬೋಧಕೇತರ ಸಿಬ್ಬಂದಿಯವರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಿಗೆ ಸುಮಂತ್ ಕುಮಾರ್ ಜೈನ್ ರವರು ಶಾಲು ಹೊದಿಸಿ, ಹಾರ ಹಾಕಿ ಸ್ಮರಣಿಕೆಯನ್ನು ನೀಡುವ ಮೂಲಕ ಅಭಿನಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಜ್ವಿತ್ ರೈ, ಪ್ರಸನ್ನ ಭೋಜ ಮತ್ತು ಈಶ್ವರ್ ಶರ್ಮರು ಕಾರ್ಯಕ್ರಮ ನಿರೂಪಿಸಿದರು. ಆಪ್ತ ಸಮಾಲೋಚನಾ ವಿಭಾಗದ ಮುಖ್ಯಸ್ಥ ದುರ್ಗಾಪರಮೇಶ್ವರ್ ವಂದಿಸಿದರು.