ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಜಾರು ಕಂಬ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ಯುವಕರು ಸಂಘಟನಾತ್ಮಕವಾಗಿ ಬೆಳೆದಾಗ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಧಾರ್ಮಿಕ ಭಾಷಣ ಮಾಡಿದ ಡಾಕ್ಟರೇಟ್ ಪದವಿ ಪಡೆದ ರವೀಶ್ ಪಡುಮಲೆ ಭಗವಾನ್ ಶ್ರೀ ಕೃಷ್ಣ ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಬದುಕು ಸಾಗಿಸಲು ಸಾಧ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೇಲಿನ ದಾಳಿ ಹಿಂದೂ ಸಮಾಜ ಸದಾ ಖಂಡಿಸುತ್ತದೆ ಎಂಬ ಮಾತುಗಳನ್ನು ಹೇಳಿದರು.
ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಶ್ರೀ ಜನ್ಮಾಷ್ಠಮಿಯ ಅಧ್ಯಕ್ಷ ರಾಜೇಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು. ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ದಿವಿನೇಶ್ ಮೈಕಾನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಧನ್ಯವಾದವಿತ್ತರು.