Site icon Suddi Belthangady

ಸ್ವಾವಲಂಬಿ ಬದುಕು ಮತ್ತು ದೇಶೀಯತೆಯನ್ನು ಉಳಿಸಿ ಬೆಳೆಸೋಣ: ಜೈನ ಮಠದ ಮಹಾಸ್ವಾಮೀಜಿ: ವೈಬ್ರೆಂಟ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಜೈನ ಮಠದ ಸ್ವಾಮೀಜಿ ಅಭಿಮತ

ಬೆಳ್ತಂಗಡಿ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಜೈನ ಮಠದ ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ನಾವೆಲ್ಲರೂ ಇವತ್ತು ಸ್ವಚ್ಛಂದವಾಗಿ ಉತ್ಸಾಹ ಮತ್ತು ಸ್ವಾಭಿಮಾನದಿಂದ ಜೀವನ ನಡೆಸಲು ಕಾರಣ ಹಿಂದಿನ ಕಾಲದಲ್ಲಿ ಸ್ವಾತಂತ್ರ್ಯಕೋಸ್ಕರ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾತ್ಮರುಗಳೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಾವೆಲ್ಲರೂ ಅವರಿಗೆ ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದು ಹೇಳಿದರು. ಪ್ರತಿಯೊಬ್ಬರು ಸ್ವಾಭಿಮಾನದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸಬೇಕು. ಭಾರತ ಹಿಂದಿನಿಂದಲೂ ಸಂಪತ್ಭರಿತ ದೇಶವಾಗಿದೆ ನಮ್ಮ ದೇಶದ ಸಂಪತ್ತನ್ನು ಸಮರ್ಪಕಾಗಿ ಬಳಸಿಕೊಂಡು ಹೆಚ್ಚು ಹೆಚ್ಚು ದೇಶಿಯ ಉತ್ಪನ್ನಗಳನ್ನು ಉತ್ಪಾದಿಸಿ, ಉಪಯೋಗಿಸಿ ಬೇರೆ ಯಾವ ದೇಶದ ಅಂಗಿನಲ್ಲಿ ಬದುಕುವ ಸ್ಥಿತಿ ಭಾರತೀಯರಿಗಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡುವ ಮೂಲಕ ಸ್ವಾವಲಂಬಿ ಮತ್ತು ದೇಶೀಯತೆಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶವು ಪ್ರಕೃತಿ ರಮಣೀಯವಾಗಿದ್ದು, ವೈವಿಧ್ಯತೆಯಿಂದ ಏಕತೆಯನ್ನು ಸೂಚಿಸುವ ಸುಂದರ ಪರಿಸರವನ್ನು ಹೊಂದಿದೆ. ಆದರೆ ಇಲ್ಲಿ ಬದುಕಿರುವ ಜನಗಳು ಮಾತ್ರ ಹೊಟ್ಟೆ ಕಿಚ್ಚು, ಅಸೂಯೆ, ಕ್ರೂರತ್ವ ಮತ್ತು ಶತ್ರುತ್ವದಿಂದ ಬದುಕುವುದನ್ನು ನೋಡಬಹುದು ಈ ಮನಸ್ಥಿತಿ ಬದಲಾಗಬೇಕಾಗಿದೆ. ಯುವ ಜನತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರ ತಪ್ಪುಗಳನ್ನು ತಿದ್ದಿ ತೀಡಿ ಸಶಕ್ತ ಭಾರತದ ಸಮೃದ್ಧ ಪ್ರಜೆಯಾಗಿ ಮಾರ್ಪಡಿಸುವ ಕಾರ್ಯ ವಿದ್ಯಾಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ನಮಗೆ ದೊರೆತ ಸ್ವಾತಂತ್ರ್ಯವನ್ನು ಉಳಿಸಿ ಬದುಕಬೇಕಾಗಿದೆ. ವಿವಿಧ ರೀತಿಯ ಅಧ್ಯಯನದೊಂದಿಗೆ ಯೋಗ್ಯ ವಿದ್ಯಾರ್ಥಿಗಳಾಗಿ ಮನೋಮಯ ಕೋಶ, ಅನ್ನಮಯ ಕೋಶ, ಪ್ರಾಣಮಯ ಕೋಶ, ವಿಜ್ಞಾನಮಯ ಕೋಶವನ್ನು ಅರಿಯುವುದರ ಜೊತೆಗೆ ನಿಜವಾದ ಆನಂದಮಯ ಕೋಶವನ್ನು ತೆರೆಯೋಣ. ನೀವೆಲ್ಲರೂ ವ್ಯಕ್ತಿ ವ್ಯಕ್ತಿಗಳನ್ನು ಪ್ರೀತಿಸುವ ಹೃದಯ ಶ್ರೀಮಂತಿಕೆಯನ್ನು ಬೆಳೆಸುವ ಶಕ್ತಿಗಳಾಗಬೇಕು. ವಿಜ್ಞಾನದ ಯುಗದಲ್ಲಿ ವಿಜ್ಞಾನವನ್ನು ಅತಿರೇಕದಲ್ಲಿ ಬಳಸದೆ ಸುಜ್ಞಾನದ ಮೂಲಕ ಸಹಬಾಳ್ವೆಯನ್ನು ಮಾಡುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಿವಿ ಮಾತನ್ನು ಹೇಳಿದರು.

ಮತ್ತೋರ್ವ ಅತಿಥಿಗಳಾದ ಮೂಡುಬಿದಿರೆಯ ಶ್ರೀ ಧನಲಕ್ಷ್ಮಿ ಕ್ಯಾಶ್ಯೂಶ್ ನ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀಪತಿ ಭಟ್ ರವರು ಮಾತನಾಡುತ್ತಾ, ಇಚ್ಚಾಶಕ್ತಿ ಎಂಬುದು ಇದ್ದರೆ ಸಾಧನೆ ಮಾಡಲು ನಿಮ್ಮಿಂದ ಸಾಧ್ಯವಾಗುತ್ತದೆ. ಇತಿಹಾಸವನ್ನು ತಿಳಿಯದೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರೂ ಭಾರತದ ಇತಿಹಾಸವನ್ನು ತಿಳಿದು ತಾವು ಕೂಡ ಏನಾದರೂ ಸಾಧನೆಯನ್ನು ಮಾಡುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಟ್ರಸ್ಟಿಗಳಾದ ಡಾ. ಎಸ್.ಎನ್.ವೆಂಕಟೇಶ್ ನಾಯಕ್ ರವರು ವಹಿಸಿದ್ದರು.

ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಷ್ ಝಾ, ಶರತ್ ಗೋರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿ’ ಸಿಲ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಅಜಿತ್ ಕುಮಾರ್ ಎಸ್.ಪಿ. ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಅಪರ್ಣಾ ವಂದಿಸಿದರು.

Exit mobile version