Site icon Suddi Belthangady

ತೋಟತ್ತಾಡಿ: ಬೀಗ ಮುರಿದು ಹಾಡ ಹಗಲೇ ಚಿನ್ನಾಭರಣ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ತೋಟಾತ್ತಾಡಿ‌ಯಲ್ಲಿ ಹಾಡ ಹಗಲೇ ಮನೆಯೊಂದರ ಬಾಗಿಲು ಬೀಗವನ್ನು ಮುರಿದು ಮನೆಯೊಳಗಡೆ ನುಗ್ಗಿದ ಕಳ್ಳರು ಗಾದ್ರೇಜ್‌ನ ಲಾಕರ್ ನಲ್ಲಿ ಇದ್ದ ರೂ. 1.30 ಲಕ್ಷದ ಚಿನ್ನಾಭರಣ ಕಳವುಗೈದ ಘಟನೆ ಆ.12ರಂದು ತೋಟತ್ತಾಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ತೋಟತ್ತಾಡಿ ಗ್ರಾಮದ ವೆನ್ನಾಯಿಲ್ ಮನೆ ನಿವಾಸಿ ಕುಂಞ ಕೃಷ್ಣನ್ ಎಂಬವರ ಪುತ್ರ ನಿಧೀಶ್ ವಿ.ಕೆ. ಎಂಬವರ ದೂರಿನಂತೆ ತೋಟತ್ತಾಡಿ ಗ್ರಾಮದ ವೆನ್ನಾಯಿಲ್ ಮನೆ ಎಂಬಲ್ಲಿ ತಂದೆ ಕುಂಞ ಕೃಷ್ಣನ್ ಒಬ್ಬರೇ ಇದ್ದು ಆ.12ರಂದು ಬೆಳಿಗ್ಗೆ 9 ಗಂಟೆಗೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 1ಗಂಟೆಯ ಸುಮಾರಿಗೆ ಊಟಕ್ಕೆಂದು ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಮನೆಯೊಳಗಡೆ ಇದ್ದ ಗಾದ್ರೇಜ್ ನಲ್ಲಿಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಯಾಗಿದ್ದು, ಲಾಕರ್ ನ ಬಾಕ್ಸ್ನಲ್ಲಿದ್ದ ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿತ್ತು.

ಕೂಡಲೇ ಅವರು ಮಂಗಳೂರಿನಲ್ಲಿದ್ದ ಪುತ್ರ ನಿಧೀಶ್ ಗೆ ತಿಳಿಸಿದರು. ನಿಧೀಶ್ ಮಂಗಳೂರಿನಿಂದ ಹೊರಟು ಮನೆಗೆ ಬಂದು ನೋಡಿದಾಗ ಮನೆಯ ಬಾಗಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ಗಾದ್ರೇಜ್ ನ ಲಾಕರ್ ನ ಒಳಗೆ ಇಟ್ಟಿದ್ದ ಅಂದಾಜು ರೂ,1,30,000 ಮೌಲ್ಯದ ಸುಮಾರು 2 ಪವನ್ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಬಾಕ್ಸ್‌ ನ್ನು ಅಲ್ಲೇ ಬಿಟ್ಟು ಹೋಗಿರುವುದಾಗಿದೆ ಬೆಳಕಿಗೆ ಬಂದಿತ್ತು.

ಈ ಬಗ್ಗೆ ನಿಧೀಶ್ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 52/2025 ಕಲಂ: 331(3), 305 ಬಿಎನ್ಎಸ್-2023ಯಂತೆ ಪ್ರಕರಣ ದಾಖಲಾಗಿರುತ್ತದೆ.

Exit mobile version