Site icon Suddi Belthangady

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕೇಸ್: ೧೮ ಸ್ಥಳಗಳಿಗೆ ಎನ್‌ಐಎ ದಾಳಿ

ಬೆಳ್ತಂಗಡಿ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆಯಲ್ಲಿ ಮೇ.೧ರಂದು ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಶನಿವಾರ ದ.ಕ. ಜಿಲ್ಲೆಯ ಬಜಪೆ, ಸುರತ್ಕಲ್ ಅಲ್ಲದೆ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆ ಸಹಿತ ಸುಮಾರು ೧೮ ಕಡೆ ಆರೋಪಿಗಳ ಮನೆ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಏಕಕಾಲದಲ್ಲಿ ದಾಳಿ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಿಂಜ ಬಳಿಯ ನಿವಾಸಿಯಾಗಿದ್ದು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಬೆಳ್ತಂಗಡಿಯಲ್ಲಿ ಚಿರಪರಿಚಿತರಾಗಿದ್ದ ಸುಹಾಸ್ ಶಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ೨೫ಕ್ಕೂ ಅಧಿಕ ಅಧಿಕಾರಿಗಳು ವಿವಿಧ ತಂಡಗಳಾಗಿ ಬಜಪೆಯ ಶಾಂತಿಗುಡ್ಡೆ, ತಾರಿಕಂಬ್ಳೆ, ಕಿನ್ನಿಪದವು, ಕಳವಾರು, ಸುರತ್ಕಲ್‌ನ ಚೊಕ್ಕಬೆಟ್ಟು, ಕೃಷ್ಣಾಪುರ ಪರಿಸರದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಜತೆಗೆ ಘಟನೆ ಸಂದರ್ಭ ವೈರಲ್ ಆಗಿದ್ದ ಸಿ.ಸಿ. ಕೆಮರಾದ ದೃಶ್ಯಾವಳಿಗಳನ್ನು ಆಧರಿಸಿಯೂ ಕೆಲವರನ್ನು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಪೂರಕವಾಗಿ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದೆ. ಹತ್ಯೆ ನಡೆದ ಸ್ಥಳದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಮನೆ ಪಡೆದು ಆರೋಪಿಗಳು ಹಲವು ತಿಂಗಳ ಕಾಲ ವಾಸವಿದ್ದು ಹತ್ಯೆಗೆ ಯೋಜನೆಗಳನ್ನು ರೂಪಿಸುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ೨-೩ ತಾಸುಗಳ ಕಾಲ ಅಲ್ಲಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿಗಳಿರುವ ವೀಡಿಯೋವನ್ನು ಇಲ್ಲಿಂದಲೇ ಚಿತ್ರೀಕರಿಸಲಾಗಿತ್ತು. ಆರೋಪಿಗಳ ಮನೆ ಮಾತ್ರವಲ್ಲದೆ ಅವರೊಂದಿಗೆ ಸಂಪರ್ಕದಲ್ಲಿದ್ದ ಇತರ ಕೆಲವರ ಮನೆಗಳ ಮೇಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎನ್‌ಐಎ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿರುವುದನ್ನು ಖಂಡಿಸಿ ಶಾಂತಿಗುಡ್ಡೆಯಲ್ಲಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ಈ ವೇಳೆ ನಡೆದಿದೆ. ನಿಷೇಧಿತ ಪಿಎಫ್‌ಐ ಸಂಘಟನೆಗಳ ಪಾತ್ರ, ಪಿಎಫ್‌ಐ ಸದಸ್ಯರು ಕಾನೂನುಬಾಹಿರವಾಗಿ ಸಂಘಟಿತ ರಾಗಿರುವುದು, ಸಾರ್ವಜನಿಕರಲ್ಲಿ ಭಯ ಉಂಟು ಮಾಡುವ ಕೃತ್ಯ ನಡೆಸಿರುವುದು, ಇದೊಂದು ಗಂಭೀರವಾದ ದೊಡ್ಡ ಸಂಚು ಆಗಿರುವುದು ಇತ್ಯಾದಿ ಕಾರಣಗಳಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಾಯಿದೆ ೨೦೦೮ರಡಿ ತನಿಖೆ ನಡೆಸಲು ಜೂ. ೭ರಂದು ಕೇಂದ್ರ ಗೃಹ ಇಲಾಖೆ ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು.

ಹಲವು ಸೊತ್ತು ವಶಕ್ಕೆ: ಮೂರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಎನ್‌ಐಎ ನಡೆಸಿದ ದಾಳಿ ಶೋಧದಲ್ಲಿ ೧೨ ಮಂದಿ ಆರೋಪಿಗಳು ಹಾಗೂ ಸಂಶಯಿತರ ಮನೆ ಹಾಗೂ ಸ್ಥಳಗಳನ್ನು ಪರಿಶೀಲಿಸಲಾಗಿದೆ.
೧೧ ಮೊಬೈಲ್ ಫೋನ್, ೧೩ ಸಿಮ್ ಕಾರ್ಡ್, ೮ ಮೆಮೋರಿ ಕಾರ್ಡ್ ಹಾಗೂ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹತ್ಯೆ ಸಂಚಿನ ಹಿನ್ನೆಲೆ ಬಗ್ಗೆ ತನಿಖೆ ಮುಂದುವರಿಸಲಾಗುತ್ತದೆ ಎಂದು ಎನ್‌ಐಎ ಪ್ರಕಟನೆ ತಿಳಿಸಿದೆ.

ಫಾಝಿಲ್ ಕೊಲೆಗೆ ಪ್ರತೀಕಾರ: ಮೇ ೧ರಂದು ರಾತ್ರಿ ಬಜ್ಪೆ ಸಮೀಪದ ಕಿನ್ನಿಪದವಿನಲ್ಲಿ ಗೆಳೆಯರೊಂದಿಗೆ ಸಂಚರಿಸುತ್ತಿದ್ದ ಕಾರಿಗೆ ಟೆಂಪೊ ಡಿಕ್ಕಿ ಹೊಡೆಸಿ, ತಲವಾರಿನಿಂದ ಕಡಿದು ಸುಹಾಸ್ ಶೆಟ್ಟಿಯವರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ನೇರವಾಗಿ ಭಾಗಿಯಾದವರು ಮತ್ತು ಸಹಕರಿಸಿದವರು ಸೇರಿ ಒಟ್ಟು ೧೨ ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ನಡೆದಿದ್ದ ಫಾಝಿಲ್ ಅವರ ಕೊಲೆ ಪ್ರಕರಣಕ್ಕೆ ಪ್ರತೀಕಾರವಾಗಿ ಆತನ ಸಹೋದರ ಸಹಚರರೊಂದಿಗೆ ಸೇರಿ ಹತ್ಯೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಇದೀಗ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.

೧೨ ಮಂದಿ ಬಂಧನ: ಸುರತ್ಕಲ್‌ನಲ್ಲಿ ೨೦೨೨ರ ಜುಲೈ ೨೬ರಂದು ನಡೆದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದು ರೌಡಿಶೀಟರ್ ಆಗಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಿಂಜ ನಿವಾಸಿ ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಿದ ಆರೋಪದಡಿ ಬಜಪೆ ಶಾಂತಿಗುಡ್ಡೆ ನಿವಾಸಿಗಳಾದ ಅಬ್ದುಲ್ ಸಫ್ವಾನ್ (೨೯), ನಿಯಾಜ್ (೨೮), ಕೆಂಜಾರು ಬಜಪೆ ನಿವಾಸಿ ಮೊಹಮ್ಮದ್ ಮುಝಮಿಲ್ (೩೨), ಕಳವಾರು ಕುರ್ಸುಗುಡ್ಡೆ ನಿವಾಸಿ ಕಲಂದರ್ ಶಾ (೩೧), ಚಿಕ್ಕಮಗಳೂರು ರುದ್ರಪಾದ ಕಳಸ ನಿವಾಸಿ ರಂಜಿತ್ (೧೯), ಕಳಸಕೋಟೆ ಮಾವಿನಕೆರೆ ನಿವಾಸಿ ನಾಗರಾಜ್ (೨೦), ಜೋಕಟ್ಟೆ ಈದ್ಗಾ ಮಸೀದಿ ಸಮೀಪ ನಿವಾಸಿ ಮೊಹಮ್ಮದ್ ರಿಜ್ವಾನ್ (೨೮), ಆದಿಲ್ ಮೆಹರೂಫ್ (೨೪), ಕಳುವಾರು ಆಶ್ರಯ ಕಾಲೋನಿ ನಿವಾಸಿ ಅಜರುದ್ದೀನ್ (೨೯), ಕಾವು ಬೆಳಪು ಬದ್ರಿಯಾ ನಗರದ ನಿವಾಸಿಯಾಗಿದ್ದು ಪ್ರಸ್ತುತ ಬಜಪೆ ನಿವಾಸಿಯಾಗಿರುವ ಅಬ್ದುಲ್ ಖಾದರ್ (೨೪), ಬಂಟ್ವಾಳ ಫರಂಗಿಪೇಟೆಯ ನಿವಾಸಿಯಾಗಿದ್ದು ಪ್ರಸ್ತುತ ಹಾಸನ ಕೆ. ಆರ್.ಪುರಂನಲ್ಲಿ ವಾಸವಾಗಿದ್ದ ನೌಷಾದ್ (೩೯) ಮತ್ತು ಅಬ್ದುಲ್ ರಜಾಕ್ (೫೯) ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿಯೂ ಶೋಧ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ೨೦೨೨ರ ಜು.೨೬ರಂದು ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೊಡಗು, ಮೈಸೂರು, ಸೋಮವಾರಪೇಟೆ, ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಕೆಲವು ಪ್ರದೇಶ ಸೇರಿದಂತೆ ೧೬ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರಲ್ಲದೆ ಎಸ್‌ಡಿಪಿಐ ಹಾಗೂ ಪಿಎಎಫ್‌ಐ ಸಂಘಟನೆಯ ಜತೆ ಗುರುತಿಸಿಕೊಂಡಿದ್ದ ಒಟ್ಟು ೨೧ ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ಈಗಾಗಲೇ ೨೬ ಮಂದಿ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಪಡಂಗಡಿಯ ನೌಶಾದ್ ಪತ್ತೆಗೆ ಎನ್‌ಐಎ ಅಧಿಕಾರಿಗಳು ನಿರಂತರ ಶೋಧ ನಡೆಸುತ್ತಿದ್ದಾರೆ.

Exit mobile version