Site icon Suddi Belthangady

ಲಾಯಿಲ: ಗ್ರಾ.ಪಂ. ಉಪಾಧ್ಯಕ್ಷರ ಮನೆ ಕುಸಿತ-ಹಾನಿ: ಸ್ಥಳಕ್ಕೆ ಸಂಸದರು, ಶಾಸಕರು ಭೇಟಿ

ಲಾಯಿಲ: ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಇವರ ಮನೆ ಕುಸಿತವು ಆ.8ರಂದು ರಾತ್ರಿ ನಡೆದಿದೆ.
ಘಟನಾ ಸ್ಥಳಕ್ಕೆ ದ.ಕ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದಾರೆ.

ಮನೆಯು ತಡ ರಾತ್ರಿ 1.30 ಕುಸಿದಿದೆ ಎನ್ನಲಾಗುತ್ತಿದೆ.ಮನೆಯಲ್ಲಿ ಸುಗಂಧಿ ಇವರ ಪತಿ ಜಗನ್ನಾಥ್, ಮಗ ಅನಿಲ್, ಸೊಸೆ ಮಧುರ ಪುಟ್ಟ ಮಕ್ಕಳು ಮಲಗಿದ್ದರು. ಗೋಡೆ ಬಿರುಕು ಬಿಟ್ಟ ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದರಿಂದ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿತದಿಂದ ಮನೆಯ ನಿತ್ಯ ಬಳಕೆಯ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿವೆ.

ಮನೆಯ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಕಂಪ್ರೆಸರ್ ಹಾಗೂ ಬ್ರೇಕರ್ ಮೂಲಕ ಕಪ್ಪು ಕಲ್ಲು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಹಾಗೂ ವೈಬ್ರೇಟರ್ ಒತ್ತಡಕ್ಕೆ ಕಳೆದ ಒಂದು ವರುಷಗಳ ಹಿಂದೆಯೇ ಗೋಡೆಯಲ್ಲಿ ಬಿರುಕು ಮೂಡಿದೆ ಎಂದು ಮನೆಯವರ ತಿಳಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರಕ್ಕೆ ಮನೆಯವರು ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version