Site icon Suddi Belthangady

ಯಶಸ್ಸಿನ ಬದುಕಿಗೆ ಕೌಶಲ್ಯಯುತ ಶಿಕ್ಷಣ ಅತ್ಯಗತ್ಯ – ಕೆ.ಆರ್. ಪಂಡಿತ್-ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಗದರ್ಶನ

ಬೆಳ್ತಂಗಡಿ: ಶಿಸ್ತು ಸಂಯಮದ ನಡವಳಿಕೆ ಬೌದ್ಧಿಕ ವಿಕಾಸಕ್ಕೆ ಪೂರಕ. ಸ್ವಯಂಪ್ರೇರಣೆಯಿಂದ ಪ್ರಾಮಾಣಿಕವಾಗಿ ಸಲ್ಲಿಸುವ ಸೇವೆ ಸಾರ್ಥಕ ಬದುಕಿಗೆ, ಸಮಾಜದ ಉನ್ನತಿಗೆ ಸಹಾಯಕ. ಕಠಿಣ ಪರಿಶ್ರಮ ಮತ್ತು ಕೌಶಲಗಳು ಯಶಸ್ಸ್ಸಿನ ಆಧಾರಸ್ತಂಭಗಳು. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಸಾಧ್ಯ. ಮನಸಾರೆ ಕಲಿತು ಹೃದಯಪೂರ್ವಕವಾಗಿ ಅನು?ನ ಮಾಡಿದರೆ ಪ್ರತಿಫಲವೂ ಒಳ್ಳೆಯದಾಗಿರುತ್ತದೆ ಎಂದು ಮೂಡುಬಿದಿರೆ ಹಿರಿಯ ನ್ಯಾಯವಾದಿಗಳಾದ ಕೆ ಆರ್ ಪಂಡಿತ್ ಹೇಳಿದರು.
ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್, ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ಮಾತನಾಡುತ್ತ, ಹಿರಿಯರ ಅನುಭವದ ಮಾತು ಕಿರಿಯರಿಗೆ ದಾರಿದೀಪ. ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು ಗೊಬ್ಬರವನ್ನು ಕೊಟ್ಟು ಬಂದ ಕಳೆಯನ್ನು ಕಾಲಕಾಲಕ್ಕೆ ಕೀಳುತ್ತ ಮುಂದೆ ಫಲವನ್ನು ಪಡೆಯುವಂತೆ ಬದುಕೆಂಬ ತೋಟದಲ್ಲಿ ಗುಣಗಳಿಗೆ ನೀರೆರೆದು ಪೋಷಿಸಿ ದೋಷಗಳನ್ನು ನಿವಾರಿಸಿಕೊಂಡಾಗ ಉಪಯುಕ್ತ ಜೀವನವೂ ನಮ್ಮದಾಗುತ್ತದೆ. ಆ ನಿಟ್ಟಿನಲ್ಲಿ ವಿವಿಧ ಘಟಕಗಳ ಕಾರ್ಯ ಚಟುವಟಿಕೆಗಳಲ್ಲಿ ಬದ್ಧತೆಯಿಂದ ಪಾಲ್ಗೊಂಡು ಬದುಕನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಪ್ರೇರಣೆಯನ್ನು ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಸಮಾಜ ಸೇವೆಯ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಾಣಬೇಕಾದರೆ ಶಾಲೆ ಕಾಲೇಜುಗಳಲ್ಲಿ ವಿವಿಧ ಘಟಕಗಳ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ನೋಡಿ ಕಲಿ ಮಾಡಿ ತಿಳಿ ತತ್ವವನ್ನು ಅಳವಡಿಸಿಕೊಳ್ಳಬೇಕು. ಇಂದಿನ ಸವಾಲಿನ ಪಾಠಗಳು ಮುಂದಿನ ಸಂತೋಷದ ಬದುಕಿಗೆ ಪ್ರೇರಣೆಯಾಗುತ್ತದೆ. ಇಂದು ಬದುಕಿನಲ್ಲಿ ಮಾಡಿಕೊಳ್ಳುವ ಚಿಕ್ಕ ಬದಲಾವಣೆ ದೊಡ್ಡ ಸಾಧನೆಗೆ ಕಾರಣವಾಗುತ್ತದೆ. ಜೀವನವನ್ನು ಬಂದ ರೀತಿಯಲ್ಲಿ ಸ್ವೀಕರಿಸುವುದು ಒಂದು ಕಲೆ. ಧೈರ್ಯ ಮತ್ತು ಸಾಹಸದ ಬದುಕಿಗೆ ನಮ್ಮನ್ನು ತೆರೆದುಕೊಂಡಾಗ ನೈಜ ಜೀವನ ದರ್ಶನವಾಗುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಮಹೇಂದ್ರ ಜೈನ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವಿ ಭಟ್, ರೋವರ್ಸ್ ಅಧಿಕಾರಿ ಪ್ರದೀಪ್ ಕೆಪಿ ಮತ್ತು ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ ಶೆಟ್ಟಿ ಸ್ವಾಗತಿಸಿ, ರೋವರ್ಸ್ ವಿದ್ಯಾರ್ಥಿ ರೇವಣ್ಣ ಸಿದ್ದು ಮತ್ತು ರೆಡ್ ಕ್ರಾಸ್ ವಿದ್ಯಾರ್ಥಿ ಮನ್ನಾ ಭೋಜಕ್ಕ ಅತಿಥಿಗಳನ್ನು ಪರಿಚಯಿಸಿದರು. ಎನ್‌ಸಿಸಿ ಕೆಡೆಟ್ ದಿಶಾಂತ್ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್‌ಎಸ್‌ಎಸ್ ಸ್ವಯಂಸೇವಕಿ ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೇಂಜರ್ಸ್ ಅಧಿಕಾರಿ ಸಂಧ್ಯಾ ನಾಯಕ್ ವಂದಿಸಿದರು.

Exit mobile version