ಬಳಂಜ: ಮೂಡುಬಿದ್ರೆಯ ಮಂಗಳೂರು ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜು (MITE) ವಿದ್ಯಾರ್ಥಿಗಳಿಂದ ಸೃಜನಾತ್ಮಕ ಚಿಂತನೆ ವೃದ್ಧಿಯೊಂದಿಗೆ ಪ್ರಾಜೆಕ್ಟ್ ನ ವಿನ್ಯಾಸ ದ ಬಗ್ಗೆ ಎರಡು ದಿನದ ಕಾರ್ಯಾಗಾರ ಆ. 4 ಮತ್ತು 5ರಂದು ಸರಕಾರಿ ಪ್ರೌಢಶಾಲೆ ಬಳಂಜದಲ್ಲಿ ನಡೆಯಿತು.
ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರು ಮತ್ತು ಪ್ರೌಢಶಾಲಾ ವಿಭಾಗದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಧ್ಯಕ್ಷ ವಸಂತ ಸಾಲಿಯಾನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯಲ್ಲಿ ಇಂತಹ ಕಾರ್ಯಗಾರವನ್ನು ಹಮ್ಮಿಕೊಂಡಿರುವ ಮೈಟ್ ಕಾಲೇಜಿನ ಮುಖ್ಯಸ್ಥರನ್ನು ಹಾಗೂ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಟ್ರಸ್ಟ್ ಬಳಂಜ ಇದರ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಮಾತನಾಡಿ ಬಳಂಜ ಶಾಲೆಯನ್ನು ಎರಡು ದಿವಸದ ಕಾರ್ಯಗಾರಕ್ಕೆ ಪರಿಗಣಿಸಿದ್ದಕ್ಕಾಗಿ ಮೈಟ್ ಕಾಲೇಜಿನ ಆಡಳಿತ ಮಂಡಳಿಗೆ ಧನ್ಯವಾದಗಳು ಸಲ್ಲಿಸಿದರು. ಮಕ್ಕಳಿಗೆ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿಕೊಂಡರು.
ಮೈಟ್ ಕಾಲೇಜಿನ ಉಪನ್ಯಾಸಕ ರಂಜಿತ್ ಎಚ್.ಡಿ. ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ದಿನ ನಡೆಯುವ ಕಾರ್ಯಗಾರದ ಬಗ್ಗೆ ವಿವರಣೆಯನ್ನು ನೀಡಿದರು. ವೇದಿಕೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಂಗಸ್ವಾಮಿ ಉಪಸ್ಥಿತರಿದ್ದರು.
ಮೈಟ್ ಕಾಲೇಜಿನ ವಿದ್ಯಾರ್ಥಿಗಳಾದ ಕೃತಿಕಾ, ಪ್ರಶಸ್ತ, ನಿಶಿಕಾ, ತೀರ್ಥಶ್ರೀ, ಶೀತಲ್ ರಶ್ಮಿ, ಸಹೀಮಾ, ಜೋಸ್ವಿನ್, ಸಂಕೇತ್, ಶ್ರೀರಾಮ್, ಸುಕ್ಷಿತ್ ಮತ್ತು ಅಕ್ಷಯ್ ಭಾಗವಹಿಸಿದ್ದರು.
ಬಳೆಂಜದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆಧ್ಯಾಪಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಲೋಚನ ಕೆ. ಸ್ವಾಗತಿಸಿದರು. ಅಧ್ಯಾಪಕಿ ವೀಣಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.