ಬೆಳ್ತಂಗಡಿ: ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ನಿವೃತ್ತ ನೌಕರರ ಹಲವಾರು ಹಕ್ಕುಗಳು ತೀವ್ರ ಉಲ್ಲಂಘನೆಯ ಸ್ಥಿತಿಗೆ ತಲುಪಿರುವುದರಿಂದ, ಆ. 5ರಂದು ಜಂಟಿ ಕ್ರೀಯಾ ಸಮಿತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬಾಹ್ಯ ಬೆಂಬಲ ನೀಡುತ್ತಿದೆ.
ನಮ್ಮ ಸಂಘಟನೆಯ ದೃಷ್ಟಿಯಲ್ಲಿ ವೇತನ ಪರಿಷ್ಕರಣೆ, ಹಿಂಬಾಕಿ ಬಾಕಿ ಹಣದ ಪಾವತಿ, ಅನುಚಿತ ಶಿಸ್ತು ಕ್ರಮಗಳ ವಿರೋಧ, ಗುತ್ತಿಗೆ ನೇಮಕಾತಿಗಳ ರದ್ದುಪಡಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಕ್ರಮಗಳೆಲ್ಲ ಅತೀ ತುರ್ತು ಹಾಗೂ ನ್ಯಾಯಸಮ್ಮತ ಬೇಡಿಕೆಗಳಾಗಿವೆ. ಈ ಬೇಡಿಕೆಗಳು ಕೇವಲ ಕಾರ್ಮಿಕರ ಅಭಿವೃದ್ದಿಗೆ ಮಾತ್ರವಲ್ಲದೆ ನಿಗಮಗಳ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟಕ್ಕೂ ಅತ್ಯಂತ ಅಗತ್ಯವಾಗಿವೆ.
ಭಾರತೀಯ ಮಜ್ದೂರು ಸಂಘವು ಯಾವಾಗಲೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರೊಂದಿಗೆ ನಿಂತಿದೆ. ಕಾರ್ಮಿಕರ ಹಿತಾಸಕ್ತಿಯೇ ನಮ್ಮ ಹೋರಾಟದ ನೇರ ಉದ್ದೇಶ. ಸರ್ಕಾರವು ತಕ್ಷಣ ಸ್ಪಂದಿಸಿ ಈ ಬೇಡಿಕೆಗಳನ್ನು ಈಡೇರಿಸಬೇಕೆಂಬುದಾಗಿ ನಾವು ಒತ್ತಾಯಿಸುತ್ತೇವೆ.
ಆ. 5ರ ಪ್ರತಿಭಟನೆ ನೌಕರರ ಧ್ವನಿ, ನೌಕರರ ಆತ್ಮವಿಲ್ಲದ ಸ್ಥಿತಿಗೆ ವಿರೋಧದ ಘೋಷಣೆಯಾಗಲಿದೆ. ಎಲ್ಲ ರಾಜ್ಯ ಸರ್ಕಾರಿ ಸಾರಿಗೆ ನೌಕರರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟದ ಜೊತೆಗೆ ನಮ್ಮ ಧ್ವನಿ ಕೂಡ ಶಕ್ತಿಯಾಗಿ ನಿಲ್ಲಲಿದೆ. ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಹೇಳಿದ್ದಾರೆ.