Site icon Suddi Belthangady

ವೇಣೂರು: ದೇವಾಡಿಗರ ಸೇವಾ ವೇದಿಕೆ ಹಾಗೂ ಮಹಿಳಾ ವೇದಿಕೆಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮ

ವೇಣೂರು: ದೇವಾಡಿಗರ ಸೇವಾ ವೇದಿಕೆ ಹಾಗೂ ದೇವಾಡಿಗರ ಮಹಿಳಾ ವೇದಿಕೆಯ ಜಂಟಿ ಆಶ್ರಯದಲ್ಲಿ ಆ.3ರಂದು ದೇವಾಡಿಗರ ಸಮುದಾಯ ಭವನ ನಿಟ್ಟಡೆಯಲ್ಲಿ ‘ಆಟಿಡೊಂಜಿ ದಿನ’ ಎಂಬ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಜರುಗಿತು.

ದೇವಾಡಿಗರ ಸೇವಾ ವೇದಿಕೆಯ ಗೌರವಾಧ್ಯಕ್ಷ ಸುಂದರ ಎಂ. ದೇವಾಡಿಗ ಅವರು ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ದೇವಾಡಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪಿ.ಎನ್. ಅವರು ಅತಿಥಿಗಳನ್ನು ಮತ್ತು ಸಮಾಜ ಬಾಂಧವರನ್ನು ಸ್ವಾಗತಿಸಿದರು. ಉಡುಪಿ ಜೆ.ಸಿ.ಐ, ಪ್ರೊವಿಜನಲ್ ನ್ಯಾಷನಲ್ ಟ್ರೈನರ್ ಜ್ಯೋತಿ ಪ್ರಶಾಂತ್ ಅವರು ಆಟಿ ತಿಂಗಳ ಮಹತ್ವದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ವೇಣೂರು ದೇವಾಡಿಗರ ಸೇವಾ ವೇದಿಕೆ ಅಧ್ಯಕ್ಷ ಸುರೇಶ್ ಮೊಯ್ಲಿ, ಉಪಾಧ್ಯಕ್ಷ ದಯಾನಂದ ದೇವಾಡಿಗ, ವೇಣೂರು ದೇವಾಡಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪಿ.ಎನ್., ಪಡಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಸಂತಿ ಪಿ.ಎನ್., ವೇಣೂರು ಗ್ರಾಮ ಪಂಚಾಯತ್ ಸದಸ್ಯೆ ವೀಣಾ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿಯ ತಿಂಡಿ ತಿನಸುಗಳ ಪ್ರದರ್ಶನ ನಡೆಯಿತು. ಸುಮಾರು 30ಕ್ಕೂ ಹೆಚ್ಚು ಬಗೆ ಬಗೆಯ ಆಟಿ ತಿಂಡಿಗಳನ್ನು ಬಂದ ಅತಿಥಿಗಳು ಮತ್ತು ಸಮಾಜ ಬಾಂಧವರು ಸವಿದು ಸಂತೋಷಪಟ್ಟರು. ಜಗನ್ನಾಥ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಚಂಪಾ ಗಣೇಶ್ ದೇವಾಡಿಗ ಧನ್ಯವಾದವಿತ್ತರು.

Exit mobile version