ಧರ್ಮಸ್ಥಳ: ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ ಬಿ.ಇ. : 9 ಕಾರನ್ನು (ಕೆ.ಎ. ೨೧ ಎಂ.ಎ.- ೬೦೩೩) ಉತ್ಪಾದನಾ ವಿಭಾಗದ ಮುಖ್ಯಸ್ಥ ವಿನಯ್‌ಖಾನೋಲ್ಕರ್ ಆ. 3ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಕೊಡುಗೆಯಾಗಿ ಅರ್ಪಿಸಿದರು.
ಹೊಸ ಮಾದರಿಯ ವಾಹನ ತಯಾರಾದ ಕೂಡಲೆ ಅದನ್ನು ಕಾಣಿಕೆಯಾಗಿ ಧರ್ಮಸ್ಥಳಕ್ಕೆ ಅರ್ಪಿಸುವುದು ತಮ್ಮ ಕಂಪೆನಿಯ ಸಂಪ್ರದಾಯವಾಗಿದೆ. ಇದರಿಂದ ಕಂಪೆನಿ ಉನ್ನತ ಪ್ರಗತಿ ಸಾಧಿಸಿದೆ ಎಂದು ಹೊಸ ಕಾರಿನ ಕೀಯನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಿದ ಕಂಪೆನಿಯ ಉತ್ಪಾದನಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ ತಿಳಿಸಿದರು.
ಕಂಪೆನಿಯ ಉದಾರ ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಕಂಪೆನಿಯು ಈ ಹಿಂದೆ ತಯಾರಿಸಿದ ಹೊಸ ಮಾದರಿಯ ವಾಹನಗಳನ್ನು ಪ್ರಥಮವಾಗಿ ಧರ್ಮಸ್ಥಳಕ್ಕೆ ಅರ್ಪಿಸಿದ್ದು, ಇದು ಅವರ ಮೂರನೆ ಕೊಡುಗೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇವರ ವಾಹನಗಳನ್ನು ಬಳಸಿಕೊಳ್ಳುತ್ತೇವೆ.
ದೇಶದ ಪ್ರತಿಷ್ಠಿತ ಮಹೇಂದ್ರ ಕಂಪೆನಿಯ ವಾಹನಗಳು ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮ ಸೇವೆ ನೀಡುತ್ತಿವೆ. ದೇಶದ ಸೇನೆಯ ವಿಭಾಗಕ್ಕೂ ಅವರು ವಾಹನಗಳನ್ನು ಪೂರೈಸುತ್ತಿದ್ದು, ತನ್ಮೂಲಕ ದೇಶಸೇವೆಗೂ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಹೇಳಿ ಹೆಗ್ಗಡೆಯವರು ಕಂಪೆನಿಯ ವ್ಯವಹಾರದಲ್ಲಿ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು. ಬಳಿಕ ಹೆಗ್ಗಡೆಯವರು ಕಾರನ್ನು ಚಾಲನೆ ಮಾಡಿ ಶುಭ ಹಾರೈಸಿದರು.
ಹೇಮಾವತಿ ವೀ. ಹೆಗ್ಗಡೆಯವರು, ಅಮಿತ್ ಮತ್ತು ಶ್ರದ್ಧಾಅಮಿತ್ ಉಪಸ್ಥಿತರಿದ್ದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ದೇವರು ಸದ್ಬುದ್ಧಿಯನ್ನು ನೀಡಿ ಹರಸಲಿ: ದೈವಜ್ಞ ಸೋಮಯಾಜಿ
ಉಜಿರೆ: ಧರ್ಮಸ್ಥಳದ ಬಗ್ಯೆ ಅನಧಿಕೃತ ಆಪಾದನೆಗಳೊಂದಿಗೆ ಅಪಪ್ರಚಾರ ಮಾಡಿ ಪಾವಿತ್ರತೆಗೆ ಧಕ್ಕೆ ಮಾಡುವ ವಿಫಲ ಯತ್ನವನ್ನು ವಿಘ್ನಸಂತೋಷಿಗಳು ಮಾಡುತ್ತಿದ್ದಾರೆ. ಇದರಿಂದಾಗಿ ಅಸಂಖ್ಯಾತ ಭಕ್ತರಿಗೆ ತೀವ್ರ ನೋವಾಗಿದೆ ಎಂದು ಧರ್ಮಸ್ಥಳದ ಅಭಿಮಾನಿಭಕ್ತರಾದ ಬೆಂಗಳೂರಿನ ಹಿರಿಯ ವಿದ್ವಾಂಸರೂ ಆದ ದೈವಜ್ಞ ಸೋಮಯಾಜಿ ಹೇಳಿದರು. ಧರ್ಮಸ್ಥಳಕ್ಕೆ ಬಂದ ಅವರು ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಹಂಚಿಕೊಂಡರು.
ಹಲವಾರು ವರ್ಷಗಳಿಂದ ತಾನೊಬ್ಬ ಧರ್ಮಸ್ಥಳದ ಅಭಿಮಾನಿಯಾಗಿದ್ದು, ಸಾಂಪ್ರದಾಯಿಕ ಬ್ರಾಹ್ಮಣನಾಗಿ, ಹಿರಿಯ ವಿದ್ವಾಂಸನಾಗಿ ಇಲ್ಲಿನ ಸೇವಾಕಾರ್ಯಗಳು ಚಿರಪರಿಚಿತವಾಗಿವೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಸ್ಥಳ ಧರ್ಮಸ್ಥಳ. “ ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಧರ್ಮಸ್ಥಳ ಎಲ್ಲರಿಗೂ ಅಪಾರ ಶ್ರದ್ಧಾ -ಭಕ್ತಿಯ ಕೇಂದ್ರವಾಗಿ ಬೆಳೆಯುತ್ತಿದೆ, ಬೆಳಗುತ್ತಿದೆ.
ಶ್ರೀರಾಮಚಂದ್ರ, ಕೃಷ್ಣ, ಸೀತೆ ಮೊದಲಾದವರಿಗೂ ಆಪಾದನೆಗಳು, ಟೀಕೆಗಳು ನಡೆದಿವೆ. ಹೆಗ್ಗಡೆಯವರು ಸ್ಥಿತಪ್ರಜ್ಞರಾಗಿ, ತಪಸ್ಸಿನಂತೆ, ತ್ಯಾಗ ಮನೋಭಾವದಿಂದ ಎಲ್ಲಾ ಸೇವಾಕಾರ್ಯಗಳನ್ನು ಲೋಕಕಲ್ಯಾಣಕ್ಕಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರಂತರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಬಗ್ಯೆ ವಿಶೇಷ ತನಿಖಾ ತಂಡ (ಎಸ್.ಐ.ಟಿ.) ರಚನೆಯ ಅಗತ್ಯ ಇರಲಿಲ್ಲ. ಆದರೂ ಸರ್ಕಾರ ತನ್ನ ಕರ್ತವ್ಯ ಮಾಡಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಅವಮಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಅಪಪ್ರಚಾರ ಮಾಡುವವರಿಗೂ ದೇವರು ಸದ್ಬುದ್ಧಿಯನ್ನು ನೀಡಿ ಹರಸಲಿ. ಹೆಗ್ಗಡೆಯವರ ಲೋಕಲ್ಯಾಣ ಕಾರ್ಯಕ್ರಮಗಳು ನಿರಂತರ ನಿರ್ವಿಘ್ನವಾಗಿ ಮುಂದುವರಿಯುವಂತೆ ದೇವರು ಹರಸಲೆಂದು ಸೋಮಯಾಜಿ ಪ್ರಾರ್ಥಿಸಿದರು.