ಬೆಳ್ತಂಗಡಿ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜೀವನದ ಗುರಿ ನಿರ್ಧಾರಗಳ ಬಗ್ಗೆ ತಿಳಿಸುವ ಉದ್ದೇಶದಿಂದ “ಗೋಲ್ ಸೆಟ್ಟಿಂಗ್”ಎಂಬ ವಿಷಯದ ಕುರಿತು ಕೌಶಲ್ಯಾಧಾರಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ಗುರಿಯನ್ನು ನಿಗದಿಪಡಿಸುವ ಮತ್ತು ಅದನ್ನು ಕಾರ್ಯಗತಗೊಳಿಸಲು ಸರಿಯಾದ ಯೋಜನೆಯ ರೂಪಿಸಿ ತಮ್ಮ ಜೀವನವನ್ನು ಉನ್ನತೀಕರಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಅರಿವು ಮೂಡಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವರ್ಷಾ ಕಾಮತ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಈಗಿನಿಂದಲೇ ತಮ್ಮ ಮುಂದಿನ ಜೀವನ ಹೇಗೆ ಇರಬೇಕು ಎಂಬುದನ್ನು ನಿರ್ಧರಿಸಿ, ತಮ್ನ ಕನಸಿನ ಬದುಕನ್ನು ನನಸಾಗಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಋಣಾತ್ಮಕ ಯೋಚನೆಗಿಂತ ಧನಾತ್ಮಕ ಯೋಚನೆಯ ಕಡೆಗೆ ಹೆಚ್ಚು ಒತ್ತುಕೊಡುವುದನ್ನು ಕಲಿತಾಗ ಬದುಕು ಸುಂದರವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು.
ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಶ್ ಝಾ, ಶರತ್ ಗೋರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು.