Site icon Suddi Belthangady

ಭತ್ತದ ಬೆಳೆ ಉಳಿವಿಗೆ ಸರ್ಕಾರದ ಪ್ರೋತ್ಸಾಹ ಅವಶ್ಯ: ಭತ್ತ ತಳಿ ಸಂರಕ್ಷಕ ಬಿ.ಕೆ. ದೇವ ರಾವ್ ಅಭಿಮತ

ಬೆಳ್ತಂಗಡಿ: ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗಿದ್ದು, ವೈವಿಧ್ಯಮಯ ಭತ್ತದ ತಳಿಗಳು ನಾಶವಾಗುವ ಭೀತಿ ಇದೆ. ಭತ್ತದ ಬೇಸಾಯ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ರೈತರು ಭತ್ತ ಬೆಳೆಯನ್ನು ಕನಿಷ್ಠ ಉಪ ಕಸುಬು ಆಗಿ ಬೆಳೆಸಿ ಸಂರಕ್ಷಿಸಬೇಕು ಎಂದು ಭತ್ತ ತಳಿ ಸಂರಕ್ಷಕ ಬಿ.ಕೆ. ದೇವ ರಾವ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜು.31ರಂದು ಮಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ದೇಶದಲ್ಲಿ ಹಿಂದೆ 2 ಲಕ್ಷ ವಿವಿಧ ಭತ್ತದ ತಳಿಗಳಿದ್ದು, ಈಗ 25 ಸಾವಿರಕ್ಕೆ ಇಳಿಕೆಯಾಗಿದೆ. ವೈಜ್ಞಾನಿಕವಾಗಿ ಭತ್ತದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರೈತರು ಪ್ರತಿ ವರ್ಷ ಮೊಳಕೆ ಭರಿಸಿ ಬಿತ್ತನೆ ನಡೆಸಿ ಬೆಳೆ ತೆಗೆದರೆ ಮಾತ್ರ ಅಪರೂಪದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಭತ್ತದ ತಳಿಗಳನ್ನು ಉಳಿಸಿ ಬೆಳೆಸಲು ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ ಎಂದರು.

ಭತ್ತದ ಕೃಷಿ ನೀರು ಇಂಗಿಸುವ ಶಕ್ತಿಯೂ ಹೌದು. ಭತ್ತದ ಗದ್ದೆಗಳು ಇರುವಲ್ಲಿ ಮಾತ್ರ ಅಂತರ್ಜಲವೂ ಹೇರಳವಾಗಿರುತ್ತದೆ.ಭತ್ತದ ಗದ್ದೆಗಳನ್ನು ಇಂದು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ಭತ್ತದಲ್ಲಿ ಅನೇಕ ವಿಧಗಳಿದ್ದು, ಕ್ಯಾನ್ಸರ್ ನಿರೋಧಕ ತಳಿಗಳೂ ಇವೆ. ಅತಿಕಾಯ ಭತ್ತದ ತಳಿ ಕ್ಯಾನ್ಸರ್‌ನ್ನು ದೂರ ಮಾಡಬಲ್ಲದು. ಮುಂದಿನ ಜನಾಂಗಕ್ಕೆ ಔಷಧೀಯ ಗುಣದ, ವಿಷರಹಿತ ಭತ್ತದ ತಳಿಗಳನ್ನು ವರ್ಗಾಯಿಸಬೇಕಾಗಿದೆ.

ನನಗೆ ಗೌರವ ನೀಡುವುದಕ್ಕಿಂತ ಭತ್ತವನ್ನು ಗೌರವಿಸಿ, ಇದು ಮುಂದಿನಜನಾಂಗದ ಉಳಿವಿಗೆ ಅತ್ಯವಶ್ಯಕ ಎಂದು ಅವರು ಹೇಳಿದರು.ದೇವರಾವ್ ಅವರ ಪುತ್ರ ಬಿ.ಕೆ.ಪರಮೇಶ್ವರ ರಾವ್ ಮಾತನಾಡಿ ‘ರಾಸಾಯನಿಕ ರಹಿತ ಭತ್ತದ ಬೇಸಾಯ ಮಾಡುತ್ತಿದ್ದೇವೆ. ಸೆಗಣಿ, ಹಟ್ಟಿ ಗೊಬ್ಬರವನ್ನು ಬಳಸಿದರೆ ಸಾಕಾಗುತ್ತದೆ. ಭತ್ತ ಶ್ರೇಷ್ಠ ಆಹಾರ ಬೆಳೆಯಾಗಿದ್ದು, ಬೆಲೆಯಲ್ಲೂ ತಾರತಮ್ಯ ಇರುವುದರಿಂದ ಭತ್ತದ ಕೃಷಿಕರಿಗೆ ಅನ್ಯಾಯವಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಚೇರ್ಮನ್ ಡಾ.ರಾಘವೇಂದ್ರ ಹೊಳ್ಳ ಮಾತನಾಡಿ ‘ಅಪರೂಪದ ಭತ್ತದ ತಳಿಗಳನ್ನು ಸಂಗ್ರಹಿಸಿ ಪೋಷಿಸುವ ಇಂತಹ ವ್ಯಕ್ತಿಗಳಿಗೆ ಸಮಾಜ ಬೆಂಬಲ ನೀಡಬೇಕು.

ಶಿಕ್ಷಣ ಸಂಸ್ಥೆಗಳು ಕೂಡಾ ಕೃಷಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

Exit mobile version