ಬೆಳ್ತಂಗಡಿ:’ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಅಡಿಗಲ್ಲು. ವಿದ್ಯಾರ್ಥಿಗಳಿಗಳು ವಿದ್ಯಾಸಂಸ್ಥೆಯೊಂದರಲ್ಲಿನ ಅವಕಾಶ ಸದ್ಭಳಕೆ ಮಾಡಿಕೊಂಡು ಪ್ರತಿಭೆಯನ್ನು ಬೆಳಗಿಸಬೇಕು’ ಎಂದು ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಕೋಟ್ಯಾನ್ ಹೇಳಿದರು.
ಅವರು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತುಳುವ ಐಸಿರ – 2025 ತುಳು ಸಂಘದ ಉದ್ಘಾಟನೆ ಮಾಡಿ ಮಾತನಾಡಿದರು. ‘ತುಳು ಭಾಷೆ ತುಳು ಸಂಸ್ಕೃತಿಯ ಬಗ್ಗೆ ಜಗತ್ತಿನಾದ್ಯಂತ ಇರುವ ತುಳುವರು ಇವತ್ತಿಗೂ ಅಭಿಮಾನ ಬೆಳೆಸಿಕೊಂಡಿದ್ದಾರೆ. ತುಳುವರಾದವರು ತುಳು ವಿಚಾರ ಆಚಾರ ಸಂಸ್ಕೃತಿಯ ಬಗ್ಗೆ ಸದಾ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ.ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ, ತುಳು ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಅಂಕಿತ್ ಮತ್ತು ಶ್ರುತ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ದೀಪಕ್ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಖುಷಿ ಅಭಿಪ್ರಾಯ ಹಂಚಿಕೊಂಡರು.
ತುಳು ಒಗಟು, ತುಳು ಪರಿಕರಗಳ ಸ್ಪರ್ಧೆ ನಡೆದು ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮವನ್ನು ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಮೂಲಕ ಉದ್ಘಾಟಿಸಲಾಯಿತು. ತುಳುನಾಡಿನ ಅನೇಕ ಪರಿಕರಗಳ ಮೂಲಕ ವೇದಿಕೆಯನ್ನು ಅಲಂಕರಿಸಲಾಗಿತ್ತು. ತುಳು ಸಂಘದ ಸಂಚಾಲಕ ರಾಕೇಶ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿ, ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗಣೇಶ್ ಬಿ. ಶಿರ್ಲಾಲು ಪರಿಚಯಿಸಿ, ಸುಷ್ಮಾ ವಂದಿಸಿದರು. ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಸಹಕರಿಸಿದರು.