Site icon Suddi Belthangady

ಬೆಳ್ತಂಗಡಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಿಂದ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಹಾಲು, ಹಣ್ಣು ಹಂಪಲುಗಳ ವಿತರಣೆ

ಬೆಳ್ತಂಗಡಿ : ನಾಗರ ಪಂಚಮಿ ಹೆಸರಿನಲ್ಲಿ ಮೌಢ್ಯಕ್ಕೆ ಒಳಗಾಗಿ ಜನರು ಹಾಲನ್ನು ನಾಗರ ಹುತ್ತಗಳಿಗೆ, ಕಲ್ಲಿಗೆ ಸುರಿದು ಅಪಾರ ಪೌಷ್ಟಿಕಾಂಶಯುಳ್ಳ ಹಾಲನ್ನು ಪೋಲು ಮಾಡುವ ಬದಲಾಗಿ ರೋಗಿಗಳಿಗೆ ನೀಡುವ ವಿನೂತನ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆ ಇಂದು ಸಾಕ್ಷಿಯಾಯಿತು.

ನಾಗರ ಪಂಚಮಿ ದಿನದಂದು ಮಂಗಳವಾರ ಬೆಳ್ತಂಗಡಿ ತಾಲೂಕು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳಿಗೆ ಉಚಿತವಾಗಿ ಹಾಲು , ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ. ರವರು ದೇಶದಲ್ಲಿ 28 ಕೋಟಿ ಜನರು ಒಂದು ತೊಟ್ಟು ಹಾಲು ಖರೀದಿಸಲು ಸಾಧ್ಯವಿಲ್ಲದೆ ಜೀವಿಸುತ್ತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳು , ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ನಾಗರ ಪಂಚಮಿ ಹೆಸರಿನಲ್ಲಿ ಕಲ್ಲಿಗೆ, ಹುತ್ತಗಳಿಗೆ ಹಾಲು ಚೆಲ್ಲುವ ಮೂಲಕ ದುರುಪಯೋಗ ಮಾಡುತ್ತೇವೆ. ಅದರ ಬದಲಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ , ರೋಗಿಗಳಿಗೆ ನೀಡಿದರೆ ಉತ್ತಮ. ರೆಡ್ ಕ್ರಾಸ್ ಸೊಸೈಟಿ ಇಡೀ ಜಗತ್ತಿನಾದ್ಯಂತ ಅಪೌಷ್ಟಿಕತೆಯ ವಿರುದ್ಧ ಸಮರ ಸಾರಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ರೋಗಿಗಳಿಗೆ ಹಾಲು, ಹಣ್ಣುಹಂಪಲು ವಿತರಣೆ ಮಾಡಲಾಯಿತು ಎಂದರು.

ಯಾವುದೇ ರೀತಿಯ ಹಾವುಗಳು ಹಾಲು ಕುಡಿಯುವುದಿಲ್ಲ , ಹಾಲು ಕುಡಿಯುವ ಹಾವು ಸಾಯುತ್ತದೆ ಇದು ವೈಜ್ಞಾನಿಕ ಸತ್ಯ. ಆದರೂ ಹಾವಿನ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವುದನ್ನು ನಿಲ್ಲಿಸಿ , ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ನೀಡಿದರೆ ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಕೆ., ಹಿರಿಯ ಸುಶ್ರುಕ್ರಿ ಪೊನ್ನಮ್ಮ, ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಯಶವಂತ ಪಟವರ್ಧನ್, ಜೋನ್ ಅರ್ವಿನ್ ಡಿಸೋಜ , ನಿರ್ದೇಶಕಿ ನ್ಯಾಯವಾದಿ ಸುಕನ್ಯಾ ಹೆಚ್., ಸದಸ್ಯ ಶೇಖರ್ ಲಾಯಿಲ, ಎಕೆಜಿ ಸೊಸೈಟಿ ಸಿಬ್ಬಂದಿಗಳಾದ ಸಂಜೀವ ಆರ್ , ಕೀರ್ತನಾ ಉಪಸ್ಥಿತರಿದ್ದರು .

Exit mobile version