Site icon Suddi Belthangady

ಧರ್ಮಸ್ಥಳ: ಗ್ರಾಮದಲ್ಲಿ‌ ಹೆಣ ಹೂತ ಪ್ರಕರಣ-ಸಾಕ್ಷಿದೂರುದಾರ ಗುರುತಿಸಿದ ಸ್ಥಳದಲ್ಲಿ ಇಂದು ಉತ್ಖನನ-ಎಸಿ ಸಮ್ಮುಖದಲ್ಲಿ ಹೆಣ ಹೂತ ಸ್ಥಳ ಅಗೆಯುವ ಕಾರ್ಯ-ಈ ವೇಳೆ ಯಾರ್ಯಾರು ಇರ್ತಾರೆ ಗೊತ್ತಾ? ಹೇಗೆ ನಡೆಯುತ್ತೆ ಉತ್ಖನನ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿದ್ದೇನೆಂದು ತಿಳಿಸಿರುವ ಸಾಕ್ಷಿ ದೂರುದಾರ ಜು.29ರಂದು ಎಸ್ ಐ ಟಿ ಅಧಿಕಾರಿಗಳೆದುರು ತಾನು ಹೂತಿದ್ದೇನೆಂದು ಗುರುತಿಸಿರುವ ಸ್ಥಳಗಳಲ್ಲಿ ಜುಲೈ.29ರಂದು ಉತ್ಖನನ ನಡೆಯಲಿದೆ.

ಈಗಾಗಲೇ ಕ್ರೈಮ್ ಲೈನ್ ಎಳೆದಿರುವ ಸ್ಥಳಗಳಲ್ಲಿ ಮ್ಯಾಜಿಸ್ಟ್ರೇಟ್ ಎಸಿ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ನಿರ್ಧಿಷ್ಟ ಸ್ಥಳದಲ್ಲಿ ಹೊರಗಿನವರಿಗೆ ಕಾಣದಂತೆ ತೆರೆ, ಪರದೆ ಅಥವಾ ಕರ್ಟನ್ ಅಳವಡಿಸಿ ಉತ್ಖನನ ಕಾರ್ಯ ನಡೆಸಲಾಗುತ್ತದೆ. ಬಳಿಕ ಒಳಭಾಗದಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ FSL, SOCO, ಪಂಚರು, SIT ಅಧಿಕಾರಿಗಳು,ಸಾಕ್ಷಿದೂರುದಾರ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಶವ ಹೂಳೆತ್ತುವ ಸಿಬ್ಬಂದಿಯಿಂದ ಮಣ್ಣು ಅಗೆಯುವ ಕಾರ್ಯ ಆರಂಭವಾಗಲಿದೆ.

ಬಳಿಕ ಯಾವುದಾದರೂ ಅಸ್ಥಿಪಂಜರ ಅಥವಾ ಮೃತದೇಹದ ಭಾಗ ಸಿಕ್ಕಿದರೆ ವೈದ್ಯರು ಪರಿಶೀಲನೆ ನಡೆಸಿ ಅಂಗಾಂಗ ಶೇಖರಣೆ ಮಾಡ್ತಾರೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಒಂದು ವೇಳೆ ಮುಸುಕುಧಾರಿ ವ್ಯಕ್ತಿ ತೋರಿಸಿದ ಜಾಗದಲ್ಲಿ ಯಾವುದೇ ಅವಶೇಷ ಸಿಗದೆ ಇದ್ದಲ್ಲಿ ಆ ಜಾಗವನ್ನು ಮಾರ್ಕ್ ಮಾಡಲಾಗುತ್ತದೆ.

ಇಂದು ಸಾಕ್ಷಿದೂರುದಾರನಿಂದ ಮತ್ತಷ್ಟು ಜಾಗಗಳ ಗುರುತು
ಸಾಕ್ಷಿದೂರುದಾರ ನಿನ್ನೆ ಒಟ್ಟು ಹದಿನೈದು ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದು,ಅವುಗಳಲ್ಲಿ ಹದಿಮೂರು ಸ್ಥಳಗಳಿಗೆ ಗುರುತು ಹಾಕಿದ್ದು,ನದಿಯ ಮತ್ತೊಂದು ಭಾಗದಲ್ಲಿರುವ ಉಳಿದೆರಡು ಸ್ಥಳಗಳ ಬಗ್ಗೆಯೂ ಈಗಾಗಲೇ ಮಾಹಿತಿ ನೀಡಿದ್ದು,ಅಲ್ಲಿನ ಗುರುತು ಪ್ರಕ್ರಿಯೆ ಇಂದು ನಡೆಯುವ ಸಾಧ್ಯತೆಯಿದೆ.

Exit mobile version