ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್ ) ಮತ್ತು ಎನ್.ಸಿ.ಸಿ ಘಟಕಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಅವರಣದಲ್ಲಿ ಜು. 26ರಂದು 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ ಸೇನೆಯ ನಿವೃತ್ತ ಸೈನಿಕ ಡಾ. ಗೋಪಾಲಕೃಷ್ಣ ಕಾಂಚೋಡು ಮಾತಾಡಿ, ಭಾರತ ಸೇನೆಯಲ್ಲಿ ನಮ್ಮ ಸೈನಿಕರಿಗೆ ದೇಶ ಕಾಯುವ ಸಂದರ್ಭದಲ್ಲಿ ಓದಗುವ ಸಂಕಷ್ಟಗಳು ಅನೇಕ. ಪ್ರತಿಯೊಬ್ಬ ಸೈನಿಕನೂ ಕೂಡ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶ ಕಾಯುವ ಕಾಯಕದಲ್ಲಿ ತೊಡಗುತ್ತಾನೆ. ಹೀಗೆ ಶತ್ರುಗಳ ದಾಳಿಯಿಂದ ಹುತಾತ್ಮರಾದ ಸೈನಿಕರನ್ನು ಪ್ರತಿಕ್ಷಣ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಸೇನೆ ಶಾಶ್ವತ, ಸೈನಿಕರಲ್ಲ ಹಾಗಾಗಿ ಸೈನ್ಯದ ಮಹತ್ವಗಳನ್ನು ಈಗಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ ವಿಶ್ವನಾಥ ಪಿ ಮಾತಾಡಿ, 26 ವರ್ಷದ ಹಿಂದೆ ಕಾರ್ಗಿಲ್ ಯುದ್ಧದಲ್ಲಿ 30 ಸಾವಿರಕ್ಕಿಂತ ಹೆಚ್ಚು ಯೋಧರು ಪಾಲ್ಗೊಂಡಿದ್ದಾರೆ. 527 ಭಾರತೀಯ ಸೈನಿಕರ ಬಲಿದಾನ ಶ್ರಮ,ತ್ಯಾಗ ವನ್ನು ಪ್ರತಿಕ್ಷಣ ನೆನೆಯಬೇಕು ಎಂದರು .
ಎನ್.ಸಿ.ಸಿ ಘಟಕದ ಕಾಡೆಟ್ಸ್ ಗಳು ತಯಾರಿಸಿದ ಕಾರ್ಗಿಲ್ ವಿಜಯಕ್ಕೆ ಸಂಬಂಧಿಸಿದ ಬಿತ್ತಿ ಪತ್ರಿಕೆಯನ್ನು ಮುಖ್ಯ ಅತಿಥಿ ಡಾ. ಗೋಪಾಲಕೃಷ್ಣ ಕಂಚೋಡು ಅನಾವರಣಗೊಳಿಸಿದರು. ಅರವಿಂದ ಚೊಕ್ಕಾಡಿ ಅವರು ಬರೆದ ಡಾ. ಗೋಪಾಲಕೃಷ್ಣ ಕಂಚೋಡು ಅವರ ಸೈನಿಕ ಅನುಭವಗಳ ಕುರಿತಾದ ಪುಸ್ತಕ ”ಕ್ಷಮತೆ”ಯನ್ನು ಪುಸ್ತಕವನ್ನು ಡಾ. ಗೋಪಾಲಕೃಷ್ಣ ಕಂಚೋಡು ಕಾಲೇಜಿನ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ಇದನ್ನು ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರುಗಳು, ಎನ್.ಸಿ.ಸಿ ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ಸ್ವಯಂ ಸೇವಕಿ ಸನುಷಾ ಪಿಂಟೊ ನಿರೂಪಿಸಿದರು. ಲೆಫ್ಟಿನೆಂಟ್ ಡಾ. ಭಾನುಪ್ರಕಾಶ್ ಬಿ.ಇ. ವಂದಿಸಿದರು.