ಧರ್ಮಸ್ಥಳ: ಗ್ರಾಮದ ಬೋಳಿಯಾರ್, ಮುಳಿಕ್ಕರ್ ಎಂಬಲ್ಲಿ ಕಾಡಾನೆ ದಾಳಿ ಮಾಡಿದ ಘಟನೆ ಜು.28ರಂದು ನಡೆದಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರು, ಮುಳಿಕ್ಕರ್ ಎಂಬಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಕೃಷಿಕರು ತೀವ್ರ ಆತಂಕದಲ್ಲಿದ್ದಾರೆ. ಇಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಗಳು ಓಡಾಟ ನಡೆಸುತ್ತಿದೆ. ಇಲ್ಲಿ ಹಲವರ ತೋಟಗಳಿಗೆ ಆನೆ ನುಗ್ಗಿದೆ. ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಗೊಳಿಸಿದೆ. ಕೊಕ್ಕಡದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆಯ ಬಳಿಕ ಆನೆಯನ್ನು ಕಂಡ ತಕ್ಷಣ ಜನರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೆ ಓಡಾಟ; ಧರ್ಮಸ್ಥಳ ಪೆರಿಯಶಾಂತಿ ರಸ್ತೆಯ ಬದಿಯಲ್ಲಿಯೇ ಈ ಆನೆಗಳು ಓಡಾಟ ನಡೆಸುತ್ತಿದೆ. ಸೋಮವಾರ ಬೆಳಗ್ಗೆ ಒಂಟಿ ಸಲಗವೊಂದು ಬೊಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಅರಣ್ಯದತ್ತ ಸಾಗಿದೆ. ಈ ವೇಳೆ ವಾಹನಗಳು ಇಲ್ಲದಿದ್ದುದರಿಂದ ಅಪಾಯ ಸಂಭವಿಸಿಲ್ಲ. ಕಾಡಾನೆಗಳು ಬೊಳಿಯಾರು, ಮುಳಿಕ್ಕರ್ ಪರಿಸರಕ್ಕೆ ಬಂದಿದ್ದು ಕೃಷಿಗೆ ಹಾನಿಯುಂಟುಮಾಡಿದೆ.
ಕಾಡಾನೆಗಳು ನಿರಂತರ ಕೃಷಿಹಾನಿ ಮಾಡುತ್ತಿದ್ದರೂ ಅವುಗಳನ್ನು ಓಡಿಸುವ ನಿಟ್ಟಿನಲ್ಲಿ ಯಾವುದೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೋಳಿಯರ್ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದಾಗ ಬೆಳಿಗ್ಗೆ ಕಾಡಾನೆ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದ ಕಾಡಾನೆ. ಓಡಿ ಅಂಗಡಿ ಒಳಗೆ ಸೇರಿ ಪಾರಾದ ಮಕ್ಕಳು. ಆನೆಯ ಚಿತ್ರಣ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.