ಉಜಿರೆ: ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವುಗಳನ್ನು ಆಹಾರವಾಗಿ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನಗಳು ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೂ ಕೃಷಿಯು ಮೂಲವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಹಲವಾರು ಆಚರಣೆಗಳು ಬೆಳೆದು ಬಂದಿದೆ. ಆಟಿ ತಿಂಗಳಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯದೇ ಪ್ರಕೃತಿಯನ್ನು ಆರಾಧಿಸುವ ವಿಶಿಷ್ಟ ಪದ್ಧತಿಯು ಕಂಡು ಬರುತ್ತದೆ ಎಂದು ಶ್ರೀ ಧ. ಮಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಹೇಳಿದರು.
ಅವರು ಶ್ರೀ ಧ. ಮಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿ ಹಮ್ಮಿಕೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಎಸ್.ಡಿ.ಎಂ. ಕಾಲೇಜಿನ ರಂಗ ನಿರ್ದೇಶಕ ಯಶವಂತ್ ಅವರು ಮಾತನಾಡಿ ಆಟಿ ತಿಂಗಳ ಆಚರಣೆಗಳ ಕುರಿತು ಮಾಹಿತಿ ನೀಡಿ ಆಟಿ ಕಳಂಜನ ‘ಪಾಡ್ದಾನ’ ಗಳ ಹಿಂದಿರುವ ಸಂದೇಶವನ್ನು ತಿಳಿಸಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಬಿ.ಎಡ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಿರುಮಲೇಶ್ ರಾವ್ ಎನ್. ಕೆ. ಅವರು ತುಳುನಾಡಿನ ಜನರು ಪ್ರಕೃತಿಯನ್ನು ಆರಾಧಿಸಿಕೊಂಡು ಬಂದಿದ್ದು, ಇಲ್ಲಿನ ಸಂಸ್ಕೃತಿಯು ಶ್ರೇಷ್ಠತೆಯನ್ನು ಹೊಂದಿದೆ. ಆದುದರಿಂದ ಸಂಸ್ಕೃತಿಯ ಕುರಿತು ಗುರುಹಿರಿಯರು ಆಡುವ ಮಾತುಗಳನ್ನು ಇಂದಿನ ಯುವಜನತೆ ಆಲಿಸಿ ಪಾಲಿಸಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಹಿಂಗಾರ ಹೂವನ್ನು ಅರಳಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿ, ತುಳುನಾಡಿನ ವಿಶೇಷತೆಯ ಕುರಿತು ನೃತ್ಯ ಹಾಗೂ ವೀಡಿಯೋ ಪ್ರದರ್ಶನ ಮಾಡಲಾಯಿತು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಪ್ರಶ್ವಿತ್ ಆಟಿ ತಿಂಗಳ ವಿಶೇಷತೆಯನ್ನು ಕುರಿತು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ತುಳುನಾಡಿನ ತಿನಿಸುಗಳನ್ನು ಸವಿಯುವುದರೊಂದಿಗೆ ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಶಿಕ್ಷಣಾರ್ಥಿಯಾದ ದಿವ್ಯಾ ಸ್ವಾಗತಿಸಿದರು. ರಶ್ಮಿ ಕೆ.ಪಿ. ಅತಿಥಿಗಳನ್ನು ಪರಿಚಯಿಸಿದರು. ಚೈತನ್ಯ ಮತ್ತು ಪ್ರಭಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಜ್ಞಾ ಧನ್ಯವಾದವಿತ್ತರು.