Site icon Suddi Belthangady

ಕಬ್ಜ ಶರಣ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು

ಧರ್ಮಸ್ಥಳ: ದೇವಸ್ಥಾನದ ವಠಾರದಲ್ಲಿ ಶಾಂತಿಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಶರಣ್ ಬಸಪ್ಪ (ಕಬ್ಜ ಶರಣ್), ಅಭಿ ಕನ್ನಡಿಗ ಮತ್ತಿತರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧರ್ಮಸ್ಥಳ ಮೂಡಂಗಲ್ ನಿವಾಸಿ ಅಭಿದೇವ್ ಆರಿಗ ಎಂಬವರು ದೂರು ನೀಡಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ನಿವಾಸಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಲ್ಲದೆ ಶಾಂತಿಭಂಗಕ್ಕೆ ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಧರ್ಮಸ್ಥಳ ಗ್ರಾಮಸ್ಥರೇ ಭಾಧ್ಯಸ್ಥರು ಎಂದು ಪ್ರಚೋದಿಸಿ, ಭಾರತಕ್ಕೊಂದು ಸಂವಿಧಾನ ಧರ್ಮಸ್ಥಳಕ್ಕೊಂದು ಸಂವಿಧಾನ ಎಂದು ಇಲ್ಲಸಲ್ಲದ ಮಾತುಗಳನ್ನಾಡಿದ್ದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರನ್ನು ಮತ್ತು ಭಕ್ತರನ್ನು ನಿಂದಿಸಿದ್ದಾರೆ. ರಾಜ್ಯ ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ದಳದ ಬಗ್ಗೆಯೂ ಅವರಿಗೆ ಯಾವುದೇ ಭರವಸೆ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರಿಂದ ತನಿಖೆಯ ಹಾಗೂ ಭಕ್ತಾದಿಗಳ ಹಾದಿ ತಪ್ಪಿಸುವ ಕೆಲಸ ಆಗುತ್ತಿದ್ದು, ನ್ಯಾಯಾಂಗ ಮತ್ತು ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ಹೀಗಾಗಿ ಇವರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಜು.21ರಂದು ಬೆಳಗ್ಗೆ ಧರ್ಮಸ್ಥಳಕ್ಕೆ ಶರಣ್ ಬಸಪ್ಪ ಮತ್ತವರ ತಂಡ ಬಂದಿದ್ದ ವೇಳೆ ಕ್ಷೇತ್ರದ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆದಿತ್ತು.

Exit mobile version