Site icon Suddi Belthangady

ಪರೀಕ ಸೌಖ್ಯವನದ ಶ್ರೀ ಶ್ರೀನಿವಾಸ ದೇವರ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮ

ಉಜಿರೆ: ಪರೀಕ ಸೌಖ್ಯವನದ ಶ್ರೀ ಶ್ರೀನಿವಾಸ ದೇವರ ಒಂದೂವರೆ ಎಕರೆ ಗದ್ದೆಯಲ್ಲಿ ವರ್ಷಂಪ್ರತಿಯಂತೆ ಸತತ 11ನೇ ವರ್ಷದಲ್ಲಿ ‘ಸೌಖ್ಯವನದ’ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೊತೆ ಕೂಡಿಕೊಂಡು ನೇಜಿ ನಾಟಿಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಅನ್ನಭಾಗ್ಯಕ್ಕಾಗಿ ಪ್ರತೀ ವರ್ಷ ಮಾಡುವ ಈ ಕೆಲಸವು ಶ್ರೀ ಕ್ಷೇತ್ರಕ್ಕೆ ಒಳಪಟ್ಟ ಶ್ರೀ ಶ್ರೀನಿವಾಸ ದೇವರ ದೇವಸ್ಥಾನದ ವಠಾರದಲ್ಲಿ ನೇಜಿಯನ್ನು ಬಿತ್ತಿ ಬೆಳೆಸಿ, ಸರಿ ಸುಮಾರು ಒಂದು ತಿಂಗಳ ನಂತರ ಆದಿತ್ಯವಾರ ಮಧ್ಯಾಹ್ನ ಒಂದು ಘಂಟೆಯಿಂದ ಆರಂಭಿಸಿ 5 ಘಂಟೆಯವರೆಗೆ ಸೌಖ್ಯವನದ ನೂರ ಇಪ್ಪತ್ತು ಸಿಬ್ಬಂದಿಗಳು ಈ ಕೆಲಸವನ್ನು ಎರಡೂವರೇ ಘಂಟೆಯಲ್ಲಿ ಮಾಡಿ ಪೂರೈಸುತ್ತಾರೆ.

ಇದರಲ್ಲಿ ಬೆಳೆದ ಭತ್ತದಲ್ಲಿ ಬರುವ 1200 ಕೆ.ಜಿ. ಯಷ್ಟು ಅಕ್ಕಿಯನ್ನು ಸೌಖ್ಯವನದ ಸಿಬ್ಬಂದಿಗಳಿಗೆ ಪ್ರತೀ ದಿನ ಊಟೋಪಚಾರಕ್ಕೆ ಬಳಸಲಾಗುತ್ತಿದ್ದು ಮೂರು ತಿಂಗಳಿಗಾಗುವಷ್ಟು ಅಕ್ಕಿಯು ಉತ್ಪತ್ತಿಯಾಗಿ ಬರುತ್ತದೆ.

ಪ್ರತೀ ವರ್ಷ ಈ ಕೃಷಿ ಕೆಲಸಕ್ಕೆ ಉಡುಪಿಯ ಖ್ಯಾತ ಸಿವಿಲ್ ಕಂಟ್ರಾಕ್ಟರ್ ನಂದ ಕುಮಾರ್‌ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದು, ಸ್ವತಃ ಬಂದು ಭಾಗವಹಿಸುತ್ತಾರೆ. ಇದು ‘ಸೌಖ್ಯವನ’ದ ಯಶಸ್ವಿ ಕಾರ್ಯಕ್ರಮಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಇದರ ಸಂಪೂರ್ಣ ಉಸ್ತುವಾರಿಯನ್ನು ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್‌ ವಹಿಸುತ್ತಾರೆ. ಶಾಂತಿವನ ಟ್ರಸ್ಟ್ ಇದರ ಕಾರ್ಯದರ್ಶಿ ಬಿ.ಎಸ್. ತೋಳ್ವಾಡಿತ್ತಾಯ ಪ್ರೋತ್ಸಾಹವನ್ನು ನೀಡುತ್ತಾರೆ.

Exit mobile version