ನಾರಾವಿ: ಜು.19ರಂದು ಶಿಕ್ಷಕ-ರಕ್ಷಕ ಸಭೆಯ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಸಭೆಯು ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮುನಿರಾಜ್ ಜೈನ್, ರೇಂಜಾಳ ಹಾಗೂ ಡಾ. ಪ್ರಸಾದ್ ಬಿ ಶೆಟ್ಟಿ ನಾರಾವಿ ಆಗಮಿಸಿದ್ದರು. ಡಾ. ಪ್ರಸಾದ್ ಇವರು ಆರೋಗ್ಯ ಹಾಗೂ ಆಹಾರ ಸೇವನೆಯ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಿದರು. ಹಾಗೂ ಮುನಿರಾಜ್ ಜೈನ್ ಅವರು ಒಳ್ಳೆಯ ಅಂಕಗಳು, ಒಳ್ಳೆಯ ಮನುಷ್ಯ, ಒಳ್ಳೆಯ ಋಣ ಹಾಗೂ ದೇವರ ಮೇಲೆ ನಂಬಿಕೆ ಈ ವಿಚಾರದಲ್ಲಿ ಮಾತನಾಡಿದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ಶಾಲಾ ಸಂಚಾಲಕ ಫಾ| ಜೆರೊಮ್ ಡಿಸೋಜಾ ಇಂದು ಮೌಲ್ಯಗಳ ಕೊರತೆ ಕಾಣುತ್ತದೆ ಮಾನವೀಯತೆ ಎಂಬುದಿಲ್ಲ. ಶಿಕ್ಷಣವು ವಿದ್ಯಾರ್ಥಿಗಳನ್ನು ಪ್ರಾಮಾಣಿಕ ವ್ಯಕ್ತಿಗಳನ್ನಾಗಿ ಮಾಡಬೇಕು ವಿಶ್ವ ಮಾನವನಾಗುವ ಶಿಕ್ಷಣ ಆಗಬೇಕು ಎಂದು ಹೇಳಿದರು.
ಸಭೆಯಲ್ಲಿ 2024- 25ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾನ್ವಿ ಹಾಗೂ ನಮಿತಾ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ಫಾ| ಜೆರೊಮ್ ಡಿಸೋಜಾ, ಮುಖ್ಯ ಶಿಕ್ಷಕ ರಿಚರ್ಡ್ ಮೊರಾಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ ಮತ್ತು ಕಾರ್ಯದರ್ಶಿ ಎವ್ಜಿನ್ ರೊಡ್ರಿಗಸ್, ಸಂಪನ್ಮೂಲ ವ್ಯಕ್ತಿಗಳಾದ ಡಾ| ಪ್ರಸಾದ್ ಬಿ. ಶೆಟ್ಟಿ ಹಾಗೂ ಮುನಿರಾಜ್ ಜೈನ್ ಹಾಜರಿದ್ದರು. ಮುಖ್ಯ ಶಿಕ್ಷಕ ರಿಚರ್ಡ್ ಮೊರಾಸ್ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಮಾಲತಿ ವರದಿಯನ್ನು ವಾಚಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಶಕುಂತಲಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಲತಿಕಾ ಯಶೋದರ್ ವಂದನಾರ್ಪಣಗೈದರು.