ಬೆಳ್ತಂಗಡಿ: ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ ಮತ್ತು ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರಿಗೆ ಹೈಕೋರ್ಟ್ ಆದೇಶ ನೀಡಿದೆ.
ತನ್ನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್. ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ.
ಆದೇಶದ ವಿವರ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಗುರುವಾಯನಕೆರೆಯ ಸಾಯಿರಾಮ್ ಫ್ರೆಂಡ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಹಾಸ್ ಶೆಟ್ಟಿ ಅವರ ನುಡಿನಮನ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಗುರುವಾಯನಕೆರೆಯಲ್ಲಿ ಮಂಸ್ಲಿಂರವರ ಸಂಖ್ಯೆ ಜಾಸ್ತಿ. ಮುಸ್ಲಿಂರವರಲ್ಲಿ ವ್ಯಾಪಾರ, ವ್ಯವಹಾರ ಮಾಡಬಾರದು. ಮುಸ್ಲಿಂರವರಲ್ಲಿ ವ್ಯಾಪಾರ ವ್ಯವಹಾರ ಮಾಡುವುದನ್ನು ಬಹಿಷ್ಕರಿಸಬೇಕು. ಗುರುವಾಯನಕೆರೆಯಲ್ಲಿ ಬೆಳಿಗ್ಗೆ ಜಾಸ್ತಿ ಮುಸ್ಲಿಂ ರಿಕ್ಷಾ ಚಾಲಕರು ಬರುವುದು. ನಮ್ಮಲ್ಲಿ ಚಂದವಾಗಿ ಮಾತನಾಡಿ ನಮಗೆ ಗೊತ್ತಿಲ್ಲದೆ ಮೋಸ ಮಾಡುತ್ತಾರೆ ಎಂದು ತುಳು ಭಾಷೆಯಲ್ಲಿ ಮಾತನಾಡಿ ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಧರ್ಮ ಧರ್ಮಗಳ ಮಧ್ಯೆ ಕೋಮು ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಭಾರತಿ ಶೆಟ್ಟಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಆಧಾರದಲ್ಲಿ ಹರಿಪ್ರಸಾದ್ ಇರ್ವತ್ರಾಯ ಅವರು ಮೇ. 12ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಬಳಿಕ ಕೇಸು ದಾಖಲಾಗಿತ್ತು. ಈ ಎಫ್.ಐ.ಆರ್. ರದ್ದುಗೊಳಿಸಬೇಕು ಎಂದು ಭಾರತಿ ಶೆಟ್ಟಿ ಅರ್ಜಿ ಸಲ್ಲಿಸಿದ್ದರು. ಜು.18ರಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬಂದಿತ್ತು. ಸರ್ಕಾರದ ಪರ ವಕೀಲರಾದ ವಹೀದ ಆರಿಸ್ ವಾದ ಮಂಡಿಸಿ ಈ ರೀತಿಯ ದ್ವೇಷ ಭಾಷಣಗಳಿಂದಾಗಿ ಮಂಗಳೂರು ಕಡೆಗಳಲ್ಲಿ ಹೆಣಗಳ ಮೇಲೆ ಹೆಣಗಳು ಬೀಳುತ್ತಿದೆ. ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರಲಾಗುತ್ತಿದೆ.
ಈ ರೀತಿಯ ಭಾಷಣಗಳಿಗೆ ನ್ಯಾಯಾಲಯಗಳು ಕಡಿವಾಣ ಹಾಕಿದರೆ ಮಾತ್ರ ಅಲ್ಲಿಯ ಜನತೆಗೆ ಶಾಂತಿ ದೊರಕ ಬಹುದು. ಆದ್ದರಿಂದ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರುನಲ್ಲಿ ಶಾಂತಿ ನೆಲೆಗೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಆದೇಶ ನೀಡ ಬೇಕೆಂದು ವಾದ ಮಂಡಿಸಿದರು.
ವಾದ ಆಲಿಸಿದ ಹೈಕೋರ್ಟ್ ನ್ಯಾಯಾಲಯದ ಕೋರ್ಟ್ ಸಂಖ್ಯೆ 10ರ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರು ಮುಂದೆ ಯಾವುದೇ ದ್ವೇಷ ಭಾಷಣ ಮಾಡಬಾರದು. ಈಗಾಗಲೇ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ.