Site icon Suddi Belthangady

ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭವು ಜು.15ರಂದು ಕಾಲೇಜಿನ ಸಭಾಂಗಣದಲ್ಲಿ ನೆರೆವೇರಿತು. ಎಸ್.ಯನ್.ಯಂ ಪಾಲಿಟೆಕ್ನಿಕ್, ಮೂಡಬಿದಿರೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ರಾಮ್ ಪ್ರಸಾದ್ ಉದ್ಘಾಟಿಸಿ, ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ, ದೇಶಪ್ರೇಮ ಮತ್ತು ಸಹಾಯ ಮನೋಭಾವಕ್ಕೆ ಈ ರೀತಿಯ ಸ್ವಯಂ ಸೇವಾ ಸಂಘಟನೆಗಳು ಅವಶ್ಯಕವಾಗಿದೆ, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಜೀವನಕ್ಕೆ ಪೂರಕ ಎಂದರು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಅವನೀಶ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಗೌಡ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಬಳಿಕ ಅತಿಥಿಗಳು ನೂತನ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಾಗಾರವನ್ನು ನಡೆಸಿದರು. ಸ್ವಯಂ ಸೇವಕಿ ಮಂಜುಷ ಸ್ವಾಗತಿಸಿದರು. ಸ್ವಯಂ ಸೇವಕಿ ಭವಿತಾ ನಿರೂಪಿಸಿದರು. ಅಭಿಜ್ಞಾ ವಂದಿಸಿದರು.

Exit mobile version