Site icon Suddi Belthangady

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಆಳ್ವಾಸ್ ಉದ್ಯೋಗ ಮೇಳದ ಕುರಿತು ಮಾಹಿತಿ ಶಿಬಿರ-ವಿವೇಕ್ ಆಳ್ವರಿಂದ ಮಾಹಿತಿ

ಬೆಳ್ತಂಗಡಿ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಿಂದ 15ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ‘ಆಳ್ವಾಸ್‌ ಪ್ರಗತಿ’ ಆ.1, 2ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಕುರಿತು ಪೂರ್ವಭಾವಿಯಾಗಿ ಶ್ರಮೀಕಾ ಸೇವಾ ಟ್ರಸ್ಟ್ ಬೆಳ್ತಂಗಡಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಢಾನದಿಂದ ಜು.15ರಂದು ಬೆಳ್ತಂಗಡಿಯ ಸಂತೆಕಟ್ಟೆಯ ಎಸ್.ಡಿ.ಎಂ. ಸಭಾಭವನದಲ್ಲಿ ಉದ್ಯೋಗ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಯಿತು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಅವರು ಬೆಳ್ತಂಗಡಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದ ಶಿಬಿರದಲ್ಲಿ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು. ಆಗಸ್ಟ್ 1, 2ರಂದು ನಡೆಯುವ ಆಳ್ವಾಸ್ ಪ್ರಗತಿ ಉದ್ಯೋಗಮೇಳದ ಉಪಯೋಗ ಪಡೆಯುವಂತೆ ತಿಳಿಸಿದರು. ಆಳ್ವಾಸ್‌ ವಿದ್ಯಾಸಂಸ್ಥೆಯು ಇಲ್ಲಿಯವರೆಗೆ ವಿವಿಧ ಭಾಗಗಳಲ್ಲಿ 21 ಬೃಹತ್‌ ಉದ್ಯೋಗ ಮೇಳವನ್ನು ನಡೆಸಿದೆ. ಪ್ರತೀ ಮೇಳದಲ್ಲಿ ಸರಾಸರಿ 200ರಷ್ಟು ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡಿದ್ದು, ಇಲ್ಲಿಯವರೆಗೆ ಒಟ್ಟು 36,151 ಉದ್ಯೋಗಗಳನ್ನು ಒದಗಿಸಿದೆ. 61,517 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆ ಪಟ್ಟಿಗೆ ಸೇರಿದ್ದಾರೆ ಎಂದರು.

ಈ ಬಾರಿಯೂ ಬ್ಯಾಂಕಿಂಗ್‌ ಮತ್ತು ಹಣಕಾಸು, ಐ.ಟಿ., ಐ.ಟಿ.ಎಸ್‌., ಮ್ಯಾನುಫ್ಯಾಕ್ಚರಿಂಗ್‌, ಹೆಲ್ತ್‌ಕೇರ್‌ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್‌, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ಈವರೆಗೆ 80 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 130 ಕಂಪೆನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 300 ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಎಂ.ಬಿ.ಎ, ಎಂ.ಕಾಂ, ಬಿ.ಕಾಂ., ಬಿ.ಬಿ.ಎ., ಬಿ.ಎಸ್ಸಿ., ಬಿ.ಎ., ಬಿ.ಸಿ.ಎ. ಮತ್ತಿತರ ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್‌, ಬೇಸಿಕ್‌ ಸೈನ್ಸ್‌, ನರ್ಸಿಂಗ್‌, ಐಟಿಐ, ಡಿಪ್ಲೊಮಾ, ಪಿಯುಸಿ ಎಸೆಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಕಂಪೆನಿಗಳು ಉದ್ಯೋಗ ಕಲ್ಪಿಸಲಿವೆ. ಕರಾವಳಿ ಭಾಗದ ವಿವಿಧ ಕಂಪೆನಿ, ಸಂಸ್ಥೆ, ಹೊರಜಿಲ್ಲೆಯ ವಿವಿಧ ಸಂಸ್ಥೆ, ಕಂಪೆನಿಗಳು ಸಹಿತ ಉದ್ಯೋಗ ಸಂಸ್ಥೆಗಳೂ ಪಾಲ್ಗೊಳ್ಳುತ್ತಿವೆ ಎಂದು ಅವರು ಹೇಳಿದರು. ಈ ವೇಳೆ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

Exit mobile version