Site icon Suddi Belthangady

ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳ ಹೂತಿದ್ದೇನೆಂದ ಸಾಕ್ಷಿ ದೂರುದಾರನ ಗುರುತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ-ಬಂಟ್ವಾಳ ಡಿವೈಎಸ್ ಪಿಯಿಂದ ವಿಚಾರಣೆ

ಧರ್ಮಸ್ಥಳ: ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು, ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಎಸ್ ಪಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಮುಸುಕುಧಾರಿಯಾಗಿ ಹಾಜರಾದ ಬೆನ್ನಲ್ಲೇ ಆತನ ಗುರುತನ್ನು ಸಾಮಾಜಿಕ ಜಾಲ ತಾಣದಲ್ಲಿ ಬಹಿರಂಗಪಡಿಸಲಾಗಿರುವುದರ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಪ್ರಕರಣದ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ಈ ಬಗ್ಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ಇನ್ನೊಂದು ವಿಚಾರಣೆಯನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಜುಲೈ 13ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ‌ ಮೊದಲು ಅಂದ್ರೆ ಜುಲೈ. 11ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ “ಜಿಲ್ಲೆಯ ಸಕ್ಷಮ ಪ್ರಾಧಿಕಾರವು ಸದ್ರಿ ಪ್ರಕರಣದಲ್ಲಿ ಸಾಕ್ಷಿಯ ರಕ್ಷಣೆಗೆ ದಿನಾಂಕ: 10.07.2025 ಸಂಜೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿರುತ್ತದೆ.
ಆದರೆ ಸಾಕ್ಷಿ ದೂರುದಾರರ ಗುರುತಿನ ರಕ್ಷಣೆಯ ವಿಚಾರದಲ್ಲಿ, ಸಾಕ್ಷಿ ದೂರುದಾರರನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಪತ್ರಿಕಾ ಪ್ರಕಟಣೆ ಹಾಗೂ ಎಫ್‌.ಐ.ಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ, ಸಾಕ್ಷಿ ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಗೊಳಿಸಿರುವುದರಿಂದ, ಸ್ಥಳೀಯ ಅನೇಕರು ಸಾಕ್ಷಿ ದೂರುದಾರರನ್ನು ಅಂದಾಜಿಸಿರುತ್ತಾರೆ.

ಆದಾಗ್ಯೂ ಎಲ್ಲಾ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿರುತ್ತದೆ ಹಾಗೂ ಈ ಬಗ್ಗೆ ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ”ಎಂದು ತಿಳಿಸಿದ್ದರು. ಜುಲೈ. 13ರಂದು ಸಾಮಾಜಿಕ ಜಾಲತಾಣದಲ್ಲಿ ಹೆಸರು ಬಹಿರಂಗ ಪಡಿಸಿರುವ ಕುರಿತು ವಿಚಾರಣೆಯನ್ನು ಡಿವೈಎಸ್ ಪಿ ಕೈಗೆತ್ತಿಕೊಳ್ಳಲಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version