Site icon Suddi Belthangady

ಕಣಿಯೂರು ಗ್ರಾಮ ಪಂಚಾಯತ್ ಕಚೇರಿ ನವೀಕರಣಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಕಚೇರಿಯ ನವೀಕರಣ ಕಾಮಗಾರಿಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಾ.ಪಂ. ಆಡಳಿತಾಧಿಕಾರಿ ವಜಾಗೊಳಿಸಿದ್ದಾರೆ. ಕಣಿಯೂರು ಗ್ರಾಮ ಪಂಚಾಯತ್ ಕಚೇರಿಯ ದೈನಂದಿನ ಆಡಳಿತ ಕಾರ್ಯಗಳಿಗೆ ಅನುಕೂಲವಾಗುವ ಕಂಪ್ಯೂಟರ್ ಕೊಠಡಿಗೆ ಮಳೆಗಾಲದಲ್ಲಿ ನೀರು ಸುರಿದು ತೊಂದರೆಯಾಗುತ್ತಿದೆ ಮತ್ತು ಕಡತಗಳು ಮಳೆಗೆ ಒದ್ದೆಯಾಗಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಹುಮತದ ನಿರ್ಣಯ ಕೈಗೊಂಡು ಗ್ರಾಮ ಪಂಚಾಯತ್ ಕಟ್ಟಡದ ನವೀಕರಣ ಕಾರ್ಯ ಆರಂಭಿಸಲಾಗಿತ್ತು.

ಕಾಮಗಾರಿ ಆರಂಭವಾಗಿ ಕೆಲವು ದಿನಗಳ ಬಳಿಕ ಕಣಿಯೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸತೀಶ್ ರಾವ್ ಎಂಬವರು ತಾಲೂಕು ಪಂಚಾಯತ್‌ನ ಆಡಳಿತ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ಕಣಿಯೂರು ಗ್ರಾಮ ಪಂಚಾಯತ್ ಕಚೇರಿ ನವೀಕರಣಕ್ಕೆ ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿದ್ದು ಈ ನಿರ್ಣಯವನ್ನು ವಜಾಗೊಳಿಸಿ ಕಾಮಗಾರಿಯನ್ನು ತಡೆ ಹಿಡಿಯಬೇಕೆಂದು ಕೋರಿದ್ದರು. ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ತಾ.ಪಂ.ಆಡಳಿತಾಧಿಕಾರಿಯವರು ಕಣಿಯೂರು ಗ್ರಾಮ ಪಂಚಾಯತ್ ಕೈಗೊಂಡ ನಿರ್ಣಯ ಕಾನೂನು ಪ್ರಕಾರ ಆಗಿದೆ ಎಂದು ಅಭಿಪ್ರಾಯಪಟ್ಟು ಸತೀಶ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದರಿಂದಾಗಿ ಆಡಳಿತಾಧಿಕಾರಿಯವರ ಮೌಖಿಕ ಆದೇಶದನ್ವಯ ತಡೆ ಹಿಡಿಯಲಾಗಿದ್ದ ನವೀಕರಣ ಕಾಮಗಾರಿ ಪುನರಾರಂಭಗೊಂಡಿದೆ.

Exit mobile version