Site icon Suddi Belthangady

ಉಜಿರೆ: ಎಸ್‌.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

ಉಜಿರೆ: ಇಂದು ಬುದ್ದಿವಂತಿಕೆ ಅಂಕಗಳಿಗೆ ಸೀಮಿತವಾಗಿಲ್ಲ, ಇಂದಿನ ಶಿಕ್ಷಣ ವ್ಯವಸ್ಥೆ ಯಲ್ಲಿ ಅಂಕಗಳಿಗೆ ಬರವಿಲ್ಲ, ಬದುಕು ಕಟ್ಟಿಕೊಳ್ಳಲು ಅಂಕಗಳು ಸೋತಿರುವ ಈ ಕಾಲ ಘಟ್ಟದಲ್ಲಿ ವಿದ್ಯಾರ್ಥಿಯ ಮೌಲ್ಯಯುತ, ಕ್ರಿಯಾಶೀಲ ವ್ಯಕ್ತಿತ್ವವೂ ಅತೀ ಮುಖ್ಯವಾಗಿದೆ. ಹಾಗಾಗಿ ವಿದ್ಯಾರ್ಥಿದೆಸೆಯಲ್ಲಿ ಇಂತಹ ಸಂಘಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ತೆರೆದುಕೊಳ್ಳೋ ಉಪಾಯ ಕಂಡುಕೊಳ್ಳಬಹುದು. ತನ್ನ ಮನೆ, ಕುಟುಂಬ, ತನ್ನವರಿಗಾಗಿ ದುಡಿದವನನ್ನು ಯಾರೂ ನೆನಪಿಟ್ಟು ಕೊಂಡಿಲ್ಲ, ಆದರೆ ಸಮಾಜಕ್ಕಾಗಿ ದುಡಿವವನನ್ನು ಯಾರೂ ಮರೆಯುವುದಿಲ್ಲ, ಹಾಗಾಗಿ ಕಲಿಕೆ ಮೂಲಕ ಸಮಾಜಮುಖಿ ಧೋರಣೆ ರೂಢಿಸಿಕೊಳ್ಳಿಯೆಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಅವರು ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈ ಶೈಕ್ಷಣಿಕ ವರ್ಷದ ಕಾಲೇಜಿನ ಬಿಟ್ಟಿಪತ್ರಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಲಿಟ್ರರರಿ ಕ್ಲಬ್ ನ ಸಂಯೋಜಕ, ಇಂಗ್ಲೀಷ್ ವಿಭಾಗದ ಉಪನ್ಯಾಸಕ ಪಾರ್ಶ್ವನಾಥ್ ಜೈನ್ ಸಹಕರಿಸಿದರು.

ಕಲಿಕೆ ಮೂಲಕ ನಾಗರೀಕ ಪ್ರಜ್ಞೆ ಜಾಗೃತವಾಗಲಿ, ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಶಿಕ್ಷಣ ಅವಧಿ ಪರಿಪೂರ್ಣಗೊಳ್ಳಲಿಯೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಹೇಳಿದರು. ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್, ವಿಜ್ಞಾನ ಸಂಘಗಳ ಸಂಯೋಜಕ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ರಮೇಶ್ ಬಾಬು ಎಚ್.ಬಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಯೋಜಕಿ, ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ವಾಣಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭವ್ಯಶ್ರೀ ನಿರೂಪಿಸಿ, ವಂದಿಸಿದರು.

Exit mobile version