Site icon Suddi Belthangady

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳ ದಫನ ಮಾಡಿದ್ದಕ್ಕೆ ದಾಖಲೆ ಇದೆ-1980ರ ದಶಕದಿಂದಲೇ ದಾಖಲೆಗಳಿವೆ-ಗ್ರಾಮ ಪಂಚಾಯತ್ ಸ್ಪಷ್ಟನೆ

ಧರ್ಮಸ್ಥಳ: ಗ್ರಾಮದಲ್ಲಿ ಅನಾಥ ಶವಗಳ ಸಂಸ್ಕಾರ ನಡೆಯುತ್ತಾ ಇರುತ್ತದೆ. ಇದಕ್ಕೆ 1980ರ ದಶಕದಿಂದಲೇ ಬೇಕಾದ ದಾಖಲೆಪತ್ರಗಳಿವೆ. ಪಂಚಾಯತ್ ಗಮನಕ್ಕೆ ಬಾರದೇ ಯಾವುದೇ ದಫನ ಕಾರ್ಯ ಆಗಿಲ್ಲ, ಆಗಿದ್ದರೆ ಅದು ಕ್ರಿಮಿನಲ್ ಅಫೆನ್ಸ್ ಎಂದು ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ತಿಳಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ನ ಐದು ವರ್ಷಗಳ ಸಾಧನೆಯ ಸುದ್ದಿಗೋಷ್ಠಿಯ ವೇಳೆ ವರದಿಗಾರರು, ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು,ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಇದೀಗ ಎಸ್. ಪಿ. ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿರುವುದರ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿವಾಸ ರಾವ್ “ಧರ್ಮಸ್ಥಳ ಕ್ಷೇತ್ರಕ್ಕೆ ದಿನವೊಂದಕ್ಕೆ ಸರಾಸರಿ 32,000 ಯಾತ್ರಾರ್ಥಿಗಳು ಬರುತ್ತಾರೆ. ಅವರವರ ಮನೋಭೂಮಿಕೆ ಬೇರೆ ಬೇರೆ ಇರ್ತದೆ. ಹೀಗಿರುವಾಗ ಧರ್ಮಸ್ಥಳ ಗ್ರಾಮದಲ್ಲಿ ಅನಾಥವಾಗಿ ಸಿಕ್ಕ ಶವಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಪಡೆದು,ಪ್ರಕಟಣೆ ಹೊರಡಿಸಿ, ಒಂದು ವಾರಗಳ ಕಾಲ ಫ್ರೀಝರ್ ನಲ್ಲಿಟ್ಟು ನಂತರ ಅಧಿಕೃತವಾಗಿ ಯುಡಿಆರ್ ನಂಬರ್ ಘೋಷಿಸಿರುತ್ತದೆ. ಅಂತಹ ಶವದ ದಫನ್ ಕಾರ್ಯ ಗ್ರಾಮ ಪಂಚಾಯತ್ ಮೂಲಕ ನಡೆಯುತ್ತದೆ. ಅದಕ್ಕಾಗಿ ಸಫಾಯಿ ಕರ್ಮಾಚಾರಿಗಳ ಮೂಲಕ ಅದನ್ನು ನಿರ್ವಹಿಸುತ್ತೇವೆ. ಈ ಬಗ್ಗೆ 1980ರ ದಶಕದಿಂದಲೂ ದಾಖಲೆಗಳು ಲಭ್ಯ, ಸೂಕ್ತ ನಿಯಮಗಳೊಂದಿಗೆ ದಾಖಲೆ ಕೇಳಿದರೆ ನೀಡಲಾಗುವುದು” ಎಂದು ತಿಳಿಸಿದರು. ಸುದ್ದಿಗೋಷ್ಠಿಯ ಹೆಚ್ಚಿನ ವಿವರ ಸುದ್ದಿ ನ್ಯೂಸ್ ಬೆಳ್ತಂಗಡಿ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

Exit mobile version