Site icon Suddi Belthangady

ಸೋಲು ಜೀವನದ ಅಂತ್ಯವಲ್ಲ ಯಶಸ್ಸಿನ ಆರಂಭ: ಮಿಥುನ್ ರೈ ಕೆ

ಬೆಳ್ತಂಗಡಿ: ‘ಶಾಲಾ ಸಂಸತ್ತು ನಾಯಕತ್ವದ ಬೆಳವಣಿಗೆಗೆ ಅಡಿಪಾಯವನ್ನು ಒದಗಿಸುವ ವೇದಿಕೆ. ಕೈಯ ಐದು ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬನಲ್ಲಿಯೂ ಒಂದೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಸೋಲು ಜೀವನದ ಅಂತ್ಯವಲ್ಲ ಅದು ಯಶಸ್ಸಿನ ಆರಂಭ’ ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೆ. ಅಭಿಪ್ರಾಯ ಪಟ್ಟರು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯಲ್ಲಿ ಜು.8ರಂದು ಜರಗಿದ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ‘ವೇದಿಕೆಯ ಮೇಲಿರುವವರು ಮಾತ್ರ ನಾಯಕರಲ್ಲ ಮುಂಭಾಗದಲ್ಲಿರುವವರು ನಾಯಕರಾಗುವ ಯೋಗ್ಯತೆಯನ್ನು ಹೊಂದಿರುತ್ತಾರೆ. ಗುರುಕುಲ ಶಿಕ್ಷಣ ವ್ಯವಸ್ತೆ ಇರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಜಿನೇಂದ್ರ ಕುಮಾರ್ ಅವರು ಮಾತನಾಡುತ್ತಾ ‘ಜೀವನದಲ್ಲಿ ಯಾವ ಹುದ್ದೆಯು ಅಧಿಕಾರವಲ್ಲ, ಅದು ಜವಬ್ದಾರಿಯಾಗಿದೆ. ಸಂವಿಧಾನವು ಹಕ್ಕುಗಳಿಗೆ ಮಾತ್ರ ಸೀಮಿತವಲ್ಲ, ಅದರಲ್ಲಿ ಕರ್ತವ್ಯಗಳು ಕೂಡ ಇದೆ. ಪ್ರತಿಯೊಬ್ಬರೂ ಅವರ ವಯಸ್ಸಿಗನುಗುಣವಾಗಿ ದೇಶಸೇವೆಯನ್ನು ಮಾಡಬೇಕು. ಸಾರ್ವಜನಿಕ ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದುದು. ಇಲ್ಲಿ ಗೆದ್ದವನು ನಾಯಕನಲ್ಲ ಬಿದ್ದವನನ್ನು ಮೇಲೆತ್ತುವವ ನಿಜವಾದ ನಾಯಕ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ವಿದ್ಯಾರ್ಥಿ ಸಂಸತ್ತು ಕಲಿಕೆಯನ್ನು ಪಾಯೋಗಿಕವಾಗಿ ಅನುಭವಿಸುವ ಒಂದು ಉತ್ತಮ ವೇದಿಕೆಯಾಗಿದ್ದು, ಅದು ನಾಯಕತ್ವ ಮತ್ತು ಜವಬ್ದಾರಿಯ ಮೌಲ್ಯವನ್ನು ಬೆಳೆಸುತ್ತದೆ. ವ್ಯಕ್ತಿಯ ವರ್ತನೆ, ನಡತೆಗಳೇ ವ್ಯಕ್ತಿತ್ವದ ಮಾನದಂಡವಾಗಿದೆ. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.

ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಮಾತನಾಡುತ್ತಾ ಸಿಕ್ಕ ಜವಬ್ದಾರಿಗಳನ್ನು ಶ್ರದ್ದೆಯಿಂದ ನಿರ್ವಹಿಸುತ್ತ ಸಮಾಜದ ಶ್ರೇಯಸ್ಸಿಗೆ ಕಾರಣರಾಗಬೇಕು. ಇಂದು ನಿಮಗೆ ಸಿಕ್ಕ ಸ್ಥಾನ ಭಾರತೀಯ ಸಂಸತ್ತನ್ನೇರಲು ಪ್ರಥಮ ಮೆಟ್ಟಿಲಾಗಲಿ. ಎಂದು ಶುಭ ಹಾರೈಸಿದರು.

ಮಿಥುನ್ ರೈ ಹಾಗೂ ಜಿನೇಂದ್ರ ಕುಮಾರ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಹಾಗೂ ನಾಗರಿಕ ಕರ್ತವ್ಯದ ಹೊಣೆಗಾರಿಕಾ ಫಲಕವನ್ನು ವಿವಿಧ ವಿಭಾಗದ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಉಪಮುಖ್ಯೋಪಾಧ್ಯಾಯರ ಜಯಶೀಲ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಹಿತೇಶ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ವೆನೆಸ್ಸಾ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ರೀನಲ್ ರಿನ್ಸಿಯಾ ಸೆರಾವೋ ವಂದಿಸಿದರು.

Exit mobile version