ಬೆಳ್ತಂಗಡಿ: ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಯಲ್ಲಪ್ಪ ಮಾದರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗರ್ಡಾಡಿ ಗ್ರಾಮದ ಡೆಂಜೋಳಿ ಕ್ರಾಸ್ ಬಳಿ ಇರುವ ಗರ್ಡಾಡಿ ಕೋಳಿ ಫಾರ್ಮ್ಸ್ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದ್ದು ಕೋಳಿ ಫಾರ್ಮ್ಸ್ ಅಂಗಡಿಯ ಒಳಗೆ ಹುಡುಕಿದಾಗ ಕ್ಯಾಶ್ ಡ್ರಾವರ್ ಕೆಳಗಡೆ ನಸುಕೆಂಪು ಬಣ್ಣದ ಪ್ಲಾಸ್ಟಿಕ್ ಕವರಿನ ಕಟ್ಟು ಕಂಡು ಬಂದಿದೆ. ಅದರ ಒಳಗಡೆ 90 ಎಂ.ಎಲ್. ಪರಿಮಾಣದ ಮೈಸೂರು ಲ್ಯಾನ್ಸರ್ ವಿಸ್ಕಿ ಸ್ಯಾಚೆಟ್‌ಗಳು ಒಟ್ಟು 30 ಪತ್ತೆಯಾಗಿದೆ. ತಲಾ 50 ರೂ. ನಂತೆ ಒಟ್ಟು ಇದರ ಮೌಲ್ಯ ರೂ.1500 ಆಗಿದೆ. ತಲಾ 180 ಎಂ.ಎಲ್. ಪರಿಮಾಣದ ಅಮೃತ್ ಪ್ರೆಸ್ಟಿಜ್ ಫೈನ್ ವಿಸ್ಕಿ ಸ್ಯಾಚೆಟ್‌ಗಳು 4 ಪತ್ತೆಯಾಗಿದ್ದು, ಇದರ ಮೌಲ್ಯ ತಲಾ ರೂ 95 ರಂತೆ ಒಟ್ಟು 380 ಆಗಿದೆ. ಗರ್ಡಾಡಿ ಗ್ರಾಮದ ಓಂಕಾರ ನಿಲಯದ ಗೋಪಾಲ ಪೂಜಾರಿ(42ವ)ರವರು ಯಾವುದೇ ಪರವಾನಿಗೆ ಮತ್ತು ನಿಗದಿತ ಪ್ರಾಧಿಕಾರದ ಅನುಮತಿ ಇಲ್ಲದೆ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವುದು ಕಂಡು ಬಂದಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.