Site icon Suddi Belthangady

ಪದ್ಮುಂಜ: ತಿಂಗಳು ಮೂರಾದರೂ ದುರಸ್ತಿಯಾಗದ ಬಿಎಸ್‌ಎನ್‌ಎಲ್ ಟವರ್!

ವರದಿ: ಕಾಸಿಂ ಪದ್ಮುಂಜ

ಬೆಳ್ತಂಗಡಿ: ಪದ್ಮುಂಜದಲ್ಲಿ ಕಾರ್ಯಾಚರಿಸುತ್ತಿರುವ ಬಿಎಸ್‌ಎನ್‌ಎಲ್ ಟವರ್ ಸ್ಥಗಿತಗೊಂಡು ಮೂರು ತಿಂಗಳಾದರೂ ಇನ್ನೂ ದುರಸ್ತಿಯಾಗಿಲ್ಲ. ಇದನ್ನು ಕೇಳುವವರಿಲ್ಲ ನೋಡುವವರಿಲ್ಲ ಎಂಬಂತಾಗಿದೆ. ಈ ಸಮಸ್ಯೆಯನ್ನು ಯಾರಲ್ಲಿ ಹೇಳುವುದು ಕೇಳುವುದು ಎಂದು ಗೊತ್ತಾಗುತ್ತಿಲ್ಲ. ಹೈ ವೋಲ್ಟೇಜ್ ಬಂದು ಕೆಲವೊಂದು ಉಪಕರಣಗಳು ಸುಟ್ಟು ಹೋಗಿ ಟವರ್ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ವಿದ್ಯುತ್‌ನಲ್ಲಿ ಸ್ವಲ್ಪ ಏರುಪೇರಾದರೂ ಕೆಟ್ಟು ಹೋಗುತ್ತದೆ. ಅದನ್ನು ನೋಡಿಕೊಳ್ಳುವವರು ಸಿಡಿಲು ಮಿಂಚು ಬಂದಾಗ ಅದನ್ನು ಆನ್ ಆಫ್ ಮಾಡಲು ಅಲ್ಲಿ ಸಿಬ್ಬಂದಿಗಳಿಲ್ಲ. ಆದರೂ ಕೆಟ್ಟು ಹೋದ ಯಂತ್ರಗಳನ್ನು ಸರಿಪಡಿಸಬೇಕಲ್ಲವೆ ಅದೂ ಮಾಡಿಲ್ಲ. ಪದ್ಮುಂಜದಲ್ಲಿರುವುದು ಒಂದೇ ಒಂದು ಮೊಬೈಲ್ ಟವರ್. ಬಿಎಸ್‌ಎನ್‌ಎಲ್ ಟವರ್ ಬಳಕೆ ಮಾಡುತ್ತಿರುವ ಗ್ರಾಹಕರ ಪಾಡು ಇದೀಗ ಹೇಳತೀರದು. ಬಳಕೆದಾರರು ಇದೇ ನಂಬರನ್ನು ಬ್ಯಾಂಕು, ಸೊಸೈಟಿ, ಶಾಲಾ ಕಾಲೇಜುಗೆ ಬಳಕೆ ಮಾಡುತ್ತಾರೆ.

ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಲು, ಗ್ಯಾಸ್ ಬುಕ್ಕಿಂಗ್ ಮಾಡಲು, ಪಡಿತರ ಚೀಟಿ ಪಡೆಯಲು, ಕೃಷಿ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಬಿಎಸ್‌ಎನ್‌ಎಲ್ ನಂಬರ್ ಲಿಂಕ್ ಮಾಡಿಕೊಂಡಿರುತ್ತಾರೆ. ಯಾವುದೇ ವ್ಯವಹಾರ ನಡೆಸಬೇಕಾದರೆ ಒಟಿಪಿ ಮುಖಾಂತರವೇ ವ್ಯವಹಾರ ಪ್ರಾರಂಭವಾಗುತ್ತದೆ. ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಅಸ್ತವ್ಯಸ್ತವಾಗಿ ಹಲವಾರು ಸಮಯವಾಯಿತು. ಕರೆಂಟು ಹೋದರೆ ಟವರ್ ಚಾಲಾಗುತ್ತಿರಲಿಲ್ಲ. ಆದರೂ ಬಳಕೆದಾರರು ಸರ್ಕಾರಕ್ಕೆ ಶಾಪ ಹಾಕಿಕೊಂಡು ಕರೆಂಟಿರುವ ಸಂದರ್ಭದಲ್ಲಾದರೂ ಮೊಬೈಲ್ ಉಪಯೋಗಿಸುತ್ತಿದ್ದರು. ಇದೀಗ ಈ ಟವರ್ ಸ್ಥಗಿತಗೊಂಡು ತಿಂಗಳು ಮೂರಾಯಿತು. ಇನ್ನೂ ದುರಸ್ತಿಯಾಗುತಿಲ್ಲ. ಇದನ್ನು ನೋಡುವವರು ಕೇಳುವವರು ಯಾರೂ ಇಲ್ಲವೇ. ಇದನ್ನು ನಂಬಿದ ಬಳಕೆದಾರರ ಸಂಕಟಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಿ ಕೆಟ್ಟು ಹೋದ ಬಿಎಸ್‌ಎನ್‌ಎಲ್ ಟವರನ್ನು ದುರಸ್ತಿ ಪಡಿಸುವ ಮೂಲಕ ಬಿಎಸ್‌ಎನ್‌ಎಲ್ ಮೊಬೈಲ್ ಬಳಕೆದಾರರ ಸಂಕಟಕ್ಕೆ ಪರಿಹಾರ ದೊರಕಿಸಿಕೊಡಬೇಕಿದೆ.

Exit mobile version