ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆಯನ್ನು ಜು.4ರಂದು ಸೇಕ್ರೆಡ್ ಹಾರ್ಟ್ ಸಮುದಾಯ ಸಭಾಭವನದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಲಾಯಿತು.
ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಸಹಾಯಕ ಧರ್ಮ ಗುರು, ಮುಖ್ಯ ಅತಿಥಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಗಿಡವನ್ನು ನೆಟ್ಟು ಅದಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿನಿ ಸಾನ್ವಿ ಶೆಣೈ ಅವರು ವನಮಹೋತ್ಸವದ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯ, ನಾಟಕದ ಮೂಲಕ ವನಮಹೋತ್ಸವದ ಮಹತ್ವವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ದೇವಾಡಿಗ ಆಗಮಿಸಿ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವನಮಹೋತ್ಸವ ಎಂದರೆ ಗಿಡ ನೆಡುವುದು ಮಾತ್ರವಲ್ಲ ನಾವು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಬೇಕೆಂದು ಹೇಳಿ, ಮಕ್ಕಳಿಗೆ ವನಮಹೋತ್ಸವದ ಶುಭಾಶಯವನ್ನು ಕೋರಿದರು.
ಈ ಕಾರ್ಯಕ್ರಮಕ್ಕೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರಿನ ಸಹಾಯಕ ಧರ್ಮ ಗುರು ಸ್ವಾ| ಲ್ಯಾರಿ ಪಿಂಟೋ ಅವರು ಆಗಮಿಸಿ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪ್ರಕೃತಿಯನ್ನು ಪ್ರೀತಿಸಿ, ಗಿಡ-ಮರಗಳನ್ನು ಬೆಳೆಸಿ, ಪ್ರಕೃತಿಯನ್ನು ಉಳಿಸಿ, ಎಂದು ಹೇಳಿ ಮಕ್ಕಳಿಗೆ ವನಮಹೋತ್ಸವದ ಶುಭಾಶಯವನ್ನು ಕೋರಿದರು. ನಂತರ ಮುಖ್ಯ ಅತಿಥಿಗಳಿಗೆ, ಎಲ್ಲಾ ಗಣ್ಯರಿಗೆ, ಶಿಕ್ಷಕ ವೃಂದದವರಿಗೆ, ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸ್ವಾ| ದೀಪಕ್ ಲಿಯೊ ಡೇಸ ಅವರು, ಅರಣ್ಯ ಆಯುಕ್ತರಾದ ರವಿ ಕುಮಾರ್ ಅವರು, ಶಿಕ್ಷಕ- ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ- ಶಿಕ್ಷಕೇತರ ವೃಂದದವರು ಸಹಕರಿಸಿದರು. ಯಶ್ವಿನ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿ ಫ್ಲಾಯಿಡ್ ಮಿಸ್ಕಿತ್ ಕಾರ್ಯಕ್ರಮವನ್ನು ನಿರೂಪಿಸಿ, ಅಮೃತ್ ಧನ್ಯವಾದವನ್ನು ಸಮರ್ಪಿಸಿದರು.