ಕಡಿರುದ್ಯಾವರ: ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ, ಗ್ರಾಮ ಪಂಚಾಯತ್ ಕಡಿರುದ್ಯಾವರ, ಡಿ.ಕೆ.ಆರ್.ಡಿ.ಎಸ್. ಬೆಳ್ತಂಗಡಿ, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ನೇತೃತ್ವದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಜು.4ರಂದು ಕಡಿರುದ್ಯಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜೆಸಿಂತಾ ಡಿಸೋಜ ಅವರು ಡೆಂಗ್ಯೂ ನಿಯಂತ್ರಣ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ. ಅವರು ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸಲೀಂ ಆರೋಗ್ಯ ನಿರೀಕ್ಷಕರು, ಮಂಗಳೂರು ಮತ್ತು ಚೇತನ್ ನೋಡಲ್ ಕೀಟ ತಜ್ಞರು ಮಂಗಳೂರು ಇವರು ಡೆಂಗ್ಯೂ ಜ್ವರ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಮಾನಿನಿ ಮಹಿಳಾ ರಾಜ್ಯ ಒಕ್ಕೂಟ ಮತ್ತು ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹ ಜ್ಯೋತಿ ಒಕ್ಕೂಟದ ಸದಸ್ಯೆ ಸಂಧ್ಯಾ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ತಾವೇ ರಚಿಸಿ ಹಾಡಿದರು. ಕೀಟ ತಜ್ಞರು ಡಾ.ರೇಷ್ಮ ಮತ್ತು ಆರೋಗ್ಯಾಧಿಕಾರಿ ಕಛೇರಿ ಸಿಬ್ಬಂದಿ ವರ್ಗದವರು, ಜಿಲ್ಲಾ ನಿಯಂತ್ರಣಾಧಿಕಾರಿ ಕಛೇರಿ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗದವರು, ಡಿ.ಕೆ.ಆರ್.ಡಿ.ಎಸ್. ಸಿಬ್ಬಂದಿ ವರ್ಗದವರು ಮತ್ತು ಸ್ನೇಹ ಜ್ಯೋತಿ ತಾಲೂಕು ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಯಶಸ್ಸಿಗೆ ಸಹಕರಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತ್ ವಠಾರದಲ್ಲಿ ಹಣ್ಣಿನ ಗಿಡ ನೆಡಲಾಯಿತು. ಸೊಳ್ಳೆ ಉತ್ಪತ್ತಿ ನಾಶದ ಬಗ್ಗೆ ಮನೆಮನೆ ಭೇಟಿ ಮೂಲಕ ಮಾಹಿತಿ ನೀಡಿ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಯಿತು. ಸಮುದಾಯ ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆರೋಗ್ಯ ನಿರೀಕ್ಷಕ ರಕ್ಷಿತ್ ವಂದಿಸಿದರು.