Site icon Suddi Belthangady

ಸೇವಾ ನಿವೃತ್ತಿ ಹೊಂದಿದ ಹರೀಶ್ ರೈ ಅವರಿಗೆ ಬೀಳ್ಕೊಡುಗೆ ಸಮಾರಂಭ

ಅಳದಂಗಡಿ: ಭಾರತೀಯ ಭೂಸೇನೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ 20 ವರ್ಷ ಕರ್ತವ್ಯ ನಿರ್ವಹಿಸಿ, 12 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆಗೈದು ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿಯಲ್ಲಿ ಸೇವಾ ನಿವೃತ್ತಿಯನ್ನು ಹೊಂದಿರುವ ಹರೀಶ್ ರೈ ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕ ವೃಂದ, ಹಾಗೂ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಹರೀಶ್ ರೈ ಅವರು ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಕ್ಷಣಗಳನ್ನು ಮತ್ತು ಉಪನ್ಯಾಸಕ ವೃತ್ತಿಯ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಕ್ಷಕ ವೃತ್ತಿ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಸೈನಿಕ, ಶಿಕ್ಷಕ ಮತ್ತು ರೈತ ಮೂವರು ದೇಶದ ಬಹುದೊಡ್ಡ ಆಸ್ತಿ ಎಂದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸನ್ನಿ ಕೆ.ಎಂ. ವಹಿಸಿ ಹರೀಶ್ ರೈಅವರ ಕರ್ತವ್ಯನಿಷ್ಠೆ, ಸೇವಾ ಮನೋಭಾವವನ್ನು ಕೊಂಡಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನೋರ್ಬರ್ಟ್ ಮಾರ್ಟಿಸ್, ಕೊಕ್ಕಡ ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಿಶ್ವನಾಥ ರೈ ಶುಭ ಹಾರೈಸಿದರು.

ಗಣಿತಶಾಸ್ತ್ರ ಉಪನ್ಯಾಸಕ ಸದಾನಂದ ಕುಲಾಲ್ ಮತ್ತು ಆಂಗ್ಲ ಭಾಷಾ ಉಪನ್ಯಾಸಕ ಪ್ರಕಾಶ್ ರವರು ನಿವೃತ್ತರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಕೊಕ್ರಾಡಿ ಕಾಲೇಜಿನ ಉಪನ್ಯಾಸಕ ದಯಾನಂದ್ ಮತ್ತು ಇಂಜಿನಿಯರ್ ಪ್ರತೀಕ್ ನೊಚ್ಚ ಅಳದಂಗಡಿ ಹಾಗೂ ಹರೀಶ್ ರೈ ಅವರ ಪತ್ನಿ ಭಾರತಿ, ಮಕ್ಕಳಾದ ಡಾ. ಅಭಿಜ್ಞಾ, ಶುಭಜ್ಞಾ, ಅಳಿಯ ಡಾ. ನವೀನ್ ಪಕ್ಕಳ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ಭಾರತಿ ಸನ್ಮಾನ ಪತ್ರ ವಾಚಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಯ ಪೂಜಾರಿ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ಉಪನ್ಯಾಸಕಿ ಪಲ್ಲವಿ ವಂದಿಸಿದರು.

Exit mobile version