Site icon Suddi Belthangady

ಕನ್ಯಾಡಿ ಸರ್ಕಾರಿ ಶಾಲೆಯ ಪೋಷಕರ ಸಭೆಗೆ ದಾಖಲೆಯ ಸಂಖ್ಯೆಯಲ್ಲಿ ಪೋಷಕರು ಭಾಗಿ

ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -2, 2025-26ನೇ ಶೈಕ್ಷಣಿಕ ವರ್ಷದ ಪ್ರಥಮ “ಪೋಷಕರ ಸಭೆ” ಮೇ.3ರಂದು ಶಾಲೆಯ ಸಭಾಂಗಣದಲ್ಲಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಕೆ. ನಂದ ಅವರ ಅಧ್ಯಕ್ಷತೆಯಲ್ಲಿ ಬಂದಂತಹ ಎಲ್ಲ ಅತಿಥಿಗಳು ದೀಪ ಬೆಳಗುವುದರ ಮೂಲಕ ಶುಭ ಚಾಲನೆಯನ್ನು ನೀಡಿದರು.

“ಮಗುವಿನ ಬೆಳವಣಿಗೆ,ಕ್ರೀಡಾ ಚಟುವಟಿಕೆ, ದೈಹಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಬಗ್ಗೆ ಪೋಷಕರು ತಿಳಿದುಕೊಳ್ಳಲು ಪೋಷಕರ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.” ಎಂದು ಸಭೆಯ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸರಾವ್ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ, ಗ್ರಾಮ ಪಂಚಾಯತ್ ಸಿಬ್ಬಂದಿ ದೇವಿ ಪ್ರಸಾದ್ ಬೊಳ್ಮಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಚಂದ್ರಾವತಿ, ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ, ಉಜಿರೆ ದಂತ ಚಿಕಿತ್ಸಾಲಯದ ಡಾಕ್ಟರ್ ದೀಪಾಲಿ ಡೋಂಗ್ರೆ, ಶಾಲಾ ಪ್ರಭಾರ ಮುಖ ಶಿಕ್ಷಕಿ ಪುಷ್ಪಾ ಎನ್. ಹಾಗೂ ಶಾಲಾ ನಾಯಕಿ ಅನನ್ಯ ಉಪಸ್ಥಿತರಿದ್ದರು. ದೀಪಾಲಿ ಡೋಂಗ್ರೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯಲ್ಲಿ ನೀಡುವ ಪೌಷ್ಟಿಕ ಆಹಾರ ಸೇವನೆಯಿಂದಾಗುವ ಪ್ರಯೋಜನದ ಕುರಿತು ಪೋಷಕರಿಗೆ ಅರಿವನ್ನು ಮೂಡಿಸಿದರು. ಶಾಲಾ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಬರಲು ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ ಮತ್ತು ಕರಾಟೆ ತರಗತಿಯನ್ನು ನೀಡುವ ಕುರಿತು ಆ ಕಲೆಯಲ್ಲಿ ಪರಿಣಿತರಾದ ಗುರುಗಳು ಪೋಷಕರಿಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಶೇಕಡಾ 90% ರಷ್ಟು ಭಾಗವಹಿಸಿದ್ದು ವಿಶೇಷವಾಗಿತ್ತು. ಹಿರಿಯ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ಸ್ವಾಗತಿಸಿದರು. ಸಹ ಶಿಕ್ಷಕಿ ಶಾರದಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕಿ ಜೆಸಿಂತಾ ನೊರೊನ್ಹ ಧನ್ಯವಾದವಿತ್ತರು.

Exit mobile version