ಬೆಳ್ತಂಗಡಿ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಸಾವಿರಾರು ಕಾರ್ಮಿಕರ ಜೀವನವನ್ನು ಭಾರೀ ಕಷ್ಟಕ್ಕೆ ತಳ್ಳಿದೆ. ಇವರಲ್ಲಿ ದಿನಗೂಲಿ ಕಾರ್ಮಿಕರು, ಲಾರಿ ಚಾಲಕರು, ಲೋಡ್ ಕೆಲಸಗಾರರು, ಹೆಬ್ಬಾಗಿಲು ನಿರ್ವಹಕರು, ಗಣಿಗಾರಿಕಾ ಯಂತ್ರೋಪಕರಣ ಆಪರೆಟರ್‌ಗಳು ಸೇರಿದಂತೆ ಅನೇಕರು ಉದ್ಯೋಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರು ಸಂಪೂರ್ಣ ನಿರುದ್ಯೋಗದ ಸ್ಥಿತಿಗೆ ತುತ್ತಾಗಿದ್ದಾರೆ. ಕುಟುಂಬಗಳ ದಿನಚರಿ ನಿರ್ವಹಣೆಗೆ ಸಾಧ್ಯವಾಗದೆ ಅವರು ಸಾಲಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಕಾರ್ಮಿಕ ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರ ಇತ್ಯಾದಿಗಳ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕೆಲವರು ಊರು ತೊರೆದು ಬದಲಾದ ಉದ್ಯೋಗ ಹುಡುಕಲು ವಲಸೆ ಹೋಗುತ್ತಿದ್ದಾರೆ. ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಹೇಳಿದ್ದಾರೆ.
ತಾತ್ಕಾಲಿಕವಾಗಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ನಿಯಮಬದ್ಧವಾಗಿ ಪುನರಾರಂಭಿಸುವ ಕ್ರಮ ಕೈಗೊಳ್ಳಬೇಕು, ನಿರುದ್ಯೋಗದಲ್ಲಿರುವ ಕಾರ್ಮಿಕರಿಗೆ ತಾತ್ಕಾಲಿಕ ಆರ್ಥಿಕ ಪರಿಹಾರ ಘೋಷಿಸಬೇಕು, ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ಮತ್ತು ಆರೋಗ್ಯವಿಮೆಯಂತಹ ತಾತ್ಕಾಲಿಕ ಭದ್ರತೆ ಒದಗಿಸಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಹಾಗೂ ನಗರ ಉದ್ಯೋಗ ಯೋಜನೆಗಳಲ್ಲಿ ಈ ಕಾರ್ಮಿಕರಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಮಜ್ದೂರು ಸಂಘ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಹಾಗೂ ಗಣಿಗಾರಿಕಾ ಇಲಾಖೆಗೆ ಆಗ್ರಹ ಮಾಡುತ್ತಾ ಇದ್ದೇವೆ. ನಮ್ಮ ಬೇಡಿಕೆ ಮತ್ತು ಆಗ್ರಹಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರ ಜಿಲ್ಲಾ ಕೇಂದ್ರದಲ್ಲಿ ಸಂಘಟಿತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.