ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ ಹಾಗೂ ಎಸ್.ಡಿ.ಎಮ್. ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಜೂ. 30ರಂದು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ತಾ.ಕಾ.ಸೇ. ಸಂಘದ ಸದಸ್ಯ ಕಾರ್ಯದರ್ಶಿ ಸಂದೇಶ್ ಕೆ. ನೆರವೇರಿಸಿ ಕಾನೂನಿನ ಬಗ್ಗೆ ತಿಳಿದುಕೊಂಡರೆ ನಮಗೆ ಸಿಗಬೇಕಾದ ಹಕ್ಕನ್ನು ನಾವು ಪಡೆದುಕೊಳ್ಳಲು ಸಾಧ್ಯ. ಕಾನೂನಿನ ಬಗ್ಗೆ ತಿಳಿದು ನಿಮ್ಮ ಹಿರಿಯರಿಗೆ ಕಿರಿಯರಿಗೆ ಹೇಳಿದರೆ ಈ ಕಾರ್ಯಕ್ರಮವು ಸಾರ್ಥಕತೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೀತಿನ್ ಜೆಜೋ ವಕೀಲ ಬೆಳ್ತಂಗಡಿ ಅವರು ಬಾಲಕಾರ್ಮಿಕರೆಂದರೆ ಯಾರು? ಬಾಲ ಕಾರ್ಮಿಕರ ಹಕ್ಕುಗಳ ಬಗ್ಗೆ ಮತ್ತು ಮಕ್ಕಳು ಮತ್ತು ಹದಿ ಹರೆಯದವರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಯ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಉಪಸ್ಥಿತರಿದ್ದರು. ಪ್ರಭಾರ ಮುಖ್ಯೋಪಾಧ್ಯಾಯನಿ ಜೆಸಿಂತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಪ್ರವೀಣಾ ಕಾಮತ್ ಸ್ವಾಗತಿಸಿ, ಶಿಕ್ಷಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು.