Site icon Suddi Belthangady

ಉಜಿರೆ ಶ್ರೀ ಧ.ಮಂ.ಅ. ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತು ವಿವಿಧ ಸಂಘಗಳ ಉದ್ಘಾಟನೆ ಜೂ.28ರಂದು ನಡೆಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನ ಟ್ರಸ್ಟಿ ಎ.ಜೆ. ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ ಒಳ್ಳೆಯ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಂಸ್ಕಾರಯುತ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಎಂದರು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಮಾತನಾಡಿ, “ಶಾಲಾ ಸಂಸತ್ ನಲ್ಲಿರುವ ಪದಾಧಿಕಾರಿಗಳು ತಮ್ಮ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಿಸಬೇಕಾದ ಜವಾಬ್ದಾರಿ ಇದೆ. ಸ್ವಚ್ಛತೆ, ಶಿಸ್ತು ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದರೆ ನಿಮ್ಮ ಪ್ರತಿಭೆಯನ್ನು ಹೊರಹಾಕಲು ಇದೊಂದು ವೇದಿಕೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಸುರೇಶ್ ಕೆ. ವಿದ್ಯಾರ್ಥಿಗಳಿಗೆ ಶಾಲಾ ಶಿಸ್ತಿನ ಬಗ್ಗೆ ತಿಳಿಸಿದರು.
ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದ ನಿಲಯಪಾಲಕ ರವಿಚಂದ್ರ ಮತ್ತು ವಿದ್ಯಾರ್ಥಿ ನಾಯಕ ಪ್ರೇಮ್ ಎಸ್.ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಸಂಘಗಳಾದ ಸಾಹಿತ್ಯ ಸಂಘ, ಕಲಾ ಸಂಘ ಗಣಿತ-ವಿಜ್ಞಾನ ಸಂಘ, ಮಕ್ಕಳ ಹಕ್ಕು ಸಂಘ, ರೆಡ್ ಕ್ರಾಸ್, ಇಂಟರ‍್ಯಾಕ್ಟ್ ಕ್ಲಬ್, ತುಳು ಸಂಘ, ಕ್ರೀಡಾ ಸಂಘ, ಪರಿಸರ ಸಂಘ, ಇಕೋ ಕ್ಲಬ್ ಮುಂತಾದ ಸಂಘಗಳ ವಾರ್ಷಿಕ ವರದಿಯನ್ನು ವಿದ್ಯಾರ್ಥಿಗಳು ವಾಚಿಸಿದರು.

ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕರಾದ ಚಂದ್ರಶೇಖರ್ ಮತ್ತು ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ತಿನ ಅಣಕು ಅಧಿವೇಶನ ನಡೆಯಿತು. ಶಿಕ್ಷಕ ರಾಧಾಕೃಷ್ಣ ಅತಿಥಿ ಪರಿಚಯ ನೀಡಿದರು. ರಂಜಿತ್ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version