ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ಕಾಲೇಜು ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸ್ವಾಮಿ ಜೆರೋಮ್ ಡಿಸೋಜ “ವಿದ್ಯಾರ್ಥಿ ಜೀವನಲ್ಲಿ ವಹಿಸಿಕೊಂಡ ನಾಯಕತ್ವವೆಂಬ ಜವಾಬ್ದಾರಿ ಅವರ ಮುಂದಿನ ಜೀವನದಲ್ಲಿ ಶಿಸ್ತು, ಸಂಯಮ, ಸಂವಹನ ಮುಂತಾದ ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳೋದಕ್ಕೆ ಸಹಕರಿಸುತ್ತದೆ”ಎಂದರು.
ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಆಲ್ವಿನ್ ಸೆರಾವೋ ಮಾತನಾಡಿ “ನಾಯಕತ್ವ ಗುಣ ತನ್ನಿಂದ ತಾನೆ ಯಾವತ್ತೂ ಬರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕು. ಈಗ ಸಿಕ್ಕಿದ ಈ ಅವಕಾಶವನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿಯೂ ಮುಂದುವರಿಸಬೇಕು “ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಉಪಪ್ರಾoಶುಪಾಲ ಸಂತೋಷ್ ಸಲ್ದಾನ, ವಿದ್ಯಾರ್ಥಿ ಸಂಘದ ನಾಯಕಿ ಗ್ಲೆನಿಷಾ, ಉಪನಾಯಕ ಪ್ರಜ್ವಿತ್, ಕಾರ್ಯದರ್ಶಿ ಶೈಲಿ ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಸೋನಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.