ಕೊಯ್ಯೂರು: ಮಾದಕ ಮುಕ್ತ ಸಮಾಜ ನಿರ್ಮಾಣ ಮಾಡಲು ನಾವೆಲ್ಲ ಪಣ ತೊಡೋಣ. ಆ ಮೂಲಕ ಭವ್ಯ ಭಾರತದ ನಿರ್ಮಾಣ ಮಾಡೋಣ ” ಎಂಬುದಾಗಿ ಉಜಿರೆಯ ಶ್ರೀ ಧ. ಮಂ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ದಿವ ಕೊಕ್ಕಡ ಅವರು ಅಭಿಪ್ರಾಯಪಟ್ಟರು. ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆ ಅಂತರಾಷ್ಟ್ರೀಯ ದಿನ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ. ಯದುಪತಿ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಮೋಹನ ಗೌಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪವಿತ್ರ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಸಂತೋಷ್ ಕುಮಾರ್ ವಂದಿಸಿದರು.