Site icon Suddi Belthangady

ದ್ವೇಷ ಭಾಷಣ ಪ್ರಕರಣ: ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಗೆ ನಿರೀಕ್ಷಣಾ ಜಾಮೀನು

ಬೆಳ್ತಂಗಡಿ: ಕಡಬ ಗ್ರಾಮದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಅನ್ಯ ಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟಿಸುವಂತೆ ಮಾತನಾಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ರಾತ್ರಿ ಸಮಯ ಚೆಕ್ ಮಾಡುತ್ತಿರುವುದನ್ನು ವಿರೋಧಿಸಿ ಜೂ.4ರಂದು ಸಂಜೆ ಕಡಬ ಪೊಲೀಸ್ ಠಾಣೆ ಮುಂದೆ ಹಿಂದು ಸಂಘಟನೆಯ ಪ್ರಮುಖರು ಸೇರಿ ಮನವಿ ಸಲ್ಲಿಸಿದ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅವರು, ಪೊಲೀಸರು ರಾತ್ರಿ ಸಮಯ ಹಿಂದೂ ಮುಖಂಡರ ಮನೆಗೆ ಮಾತ್ರ ಹೋಗಿ ಪ್ರಮುಖರನ್ನು ಚೆಕ್ ಮಾಡಿ ಹಿಂದೂ ಮುಖಂಡರಿಗೆ ಮಾತ್ರ ತೊಂದರೆ ನೀಡುತ್ತಿದ್ದಾರೆ ಎಂದು ದ್ವೇಷದ ಭಾಷಣವನ್ನು ಮಾಡಿರುವುದು, ಅಲ್ಲಿ ಸೇರಿದ ಸಾರ್ವಜನಿಕರಿಗೆ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಮಾದವ ಪೂಜಾರಿ, ರಾಕೇಶ್ ಬಲ್ನಾಡು ಮತ್ತು ಮೋಹಿನಿ ವಾದಿಸಿದರು.

Exit mobile version