Site icon Suddi Belthangady

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಗೆ ಗ್ರಹಣ: ಅಭಿವೃದ್ಧಿ ಸ್ಥಗಿತ-ಭಕ್ತರ ಆಕ್ರೋಶ-ಸಭೆ ಕರೆದು ಪ್ರತಿಭಟಿಸುವ ಎಚ್ಚರಿಕೆ

ಬೆಳ್ತಂಗಡಿ: ಶಿಶಿಲ ಶ್ರೀ ಶಿಶಿಲೇಶ್ವರ ಜಗತ್ ಪ್ರಸಿದ್ಧಿ ದೇವಸ್ಥಾನ. ಐತಿಹಾಸಿಕ ಶಿಶಿಲೇಶ್ವರ ದೇವಸ್ಥಾನ ಈಗಾಗಲೇ ಜೀರ್ಣೋದ್ಧಾರ ಮತ್ತು ಎರಡು ಬ್ರಹ್ಮಕಲಶವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆದರೆ ರಾಜಕೀಯ ವ್ಯವಸ್ಥೆಯಿಂದ ಎರಡು ವರ್ಷ ಕಳೆದರೂ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ ಬಾಕಿ ಉಳಿದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಿತಿ ಇಲ್ಲದೆ ಅಭಿವೃದ್ಧಿ ಸ್ಥಗಿತ: ಸಮಿತಿ ಇಲ್ಲದೆ ದೇವಾಲಯದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಾವಿರಾರು ಸಂಖ್ಯೆಯಲ್ಲಿ ಊರ ಪರವೂರಿಂದ ಭಕ್ತಾದಿಗಳು ದೇವಸ್ಥಾನಕ್ಕೆ ಬರುತ್ತಿದ್ದು ಅನ್ನ ದಾಸೋಹ ನಡೆಯುತ್ತಿದೆ. ಶಿಶಿಲದಲ್ಲಿ ಪೂಜಿಸಲ್ಪಡುವ ಮತ್ಸ್ಯ ಸಂಕುಲಗಳಿವೆ. ಇವುಗಳ ಜೊತೆ ಕೃಷಿ ನಿರ್ವಹಣೆ ಆಗಬೇಕಾಗಿದೆ. ಇಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಯ್ಕೆ ಆಗಿದ್ದಾರೋ ಇಲ್ಲವೋ ಎನ್ನುವ ಕುರಿತಾಗಿ ಯಾವ ಮಾಹಿತಿಯೂ ಸಿಗದೆ ಭಕ್ತರು ಗೊಂದಲಕ್ಕೀಡಾಗಿದ್ದಾರೆ. ಮುಜರಾಯಿ ಇಲಾಖೆಯನ್ನು ಸಂಪರ್ಕಿಸಿದರೆ ಜವಾಬ್ದಾರಿಯ ಉತ್ತರವಿಲ್ಲ. ಗ್ರಾಮದ ಊರ ಪರವೂರ ದಾನಿಗಳಿಂದಲೇ ಅಭಿವೃದ್ಧಿ ಆಗಿರುವ ಈ ಪುಣ್ಯಕ್ಷೇತ್ರದ ಸಮಿತಿ ರಚನೆಗೆ ಯಾಕೆ ಮೀನಾಮೇಷ ಎಣಿಸಲಾಗುತ್ತಿದೆ ಎನ್ನುವ ಕುರಿತಾಗಿ ಗ್ರಾಮಸ್ಥರಿಗೆ ಮಾಹಿತಿಯೂ ಇಲ್ಲ.

ಆದೇಶ ಪತ್ರದಲ್ಲಿ ೭ ಸದಸ್ಯರ ಹೆಸರು: ಸದ್ಯಕ್ಕೆ ಧರ್ಮಸ್ಥಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಆಡಳಿತಾಧಿಕಾರಿಯಾಗಿ ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಸಮಿತಿ ರಚನೆಗೆ ಆದೇಶ ಬಂದಿದ್ದು ಸದಸ್ಯರ ಹೆಸರಿನ ಪ್ರತಿಯನ್ನೂ ನೀಡಿದ್ದಾರೆ. ಸಮಿತಿ ರಚನೆಗೆ ೯ ಸದಸ್ಯರ ಅಗತ್ಯವಿದೆಯಾದರೂ ನೀಡಿದ ಆದೇಶ ಪತ್ರದಲ್ಲಿ ೭ ಸದಸ್ಯರ ಹೆಸರು ಇರುವುದು ಸಮಿತಿ ರಚನೆ ವಿಳಂಬಕ್ಕೆ ಮತ್ತೆ ಕಾರಣವಾಗಿದೆ. ಶಿಶಿಲ ಬಿ. ಗ್ರೇಡ್ ದೇವಸ್ಥಾನವಾಗಿದ್ದು ೧೦ ಜನರು ಸಮಿತಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ೯ ಸದಸ್ಯರ ಆಯ್ಕೆ ಮಾಡಲಾಗಿತ್ತು. ಆದರೆ ಇಬ್ಬರ ಮೇಲೆ ಕೇಸ್ ದಾಖಲಾಗಿರುವ ಹಿನ್ನೆಲೆ ಅವರ ಅರ್ಜಿ ತಿರಸ್ಕರಿಸಲಾಗಿತ್ತು.

ಪ್ರತಿಭಟನೆಯ ಎಚ್ಚರಿಕೆ: ಈ ನಡುವೆ ಸಮಿತಿ ರಚನೆ ಆಗದಿದ್ದಲ್ಲಿ ಗ್ರಾಮದ ಭಕ್ತಾದಿಗಳು ಮುಂದಾಳತ್ವ ವಹಿಸಿ ಊರ ಭಕ್ತರ ಸಭೆ ಕರೆದು ಪ್ರತಿಭಟನೆಗೆ ಮುಂದಾಗುವುದಾಗಿ ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಕರುಣಾಕರ ಶಿಶಿಲ ಎಚ್ಚರಿಕೆ ನೀಡಿದ್ದಾರೆ.

ಆದೇಶ ಪತ್ರದಲ್ಲಿ ನೀಡಿರುವಂತೆ ಸದಸ್ಯತ್ವ ಈ ರೀತಿ ಹಂಚಲಾಗಿದೆ: ವ್ಯವಸ್ಥಾಪನಾ ಸಮಿತಿಗೆ ಅರ್ಚಕ ಸ್ಥಾನಕ್ಕೆ ಶಿಲೇಶ್ವರ ದೇವಸ್ಥಾನದದ ಪ್ರಧಾನ ಅರ್ಚಕರು, ಪ.ಜಾ ಪ. ಪಂ ಮೀಸಲಾತಿಯಲ್ಲಿ ಬಂಗ್ಲೆತಡ್ಕ ಮನೆಯ ಚೆನ್ನಪ್ಪ, ಮಹಿಳಾ ಮೀಸಲಾತಿಯಲ್ಲಿ ಎಳ್ಳುಮಜಲಿನ ವಿಮಲ, ದೇವಾಸ ಮನೆಯ ಪ್ರೇಮ, ಸಾಮಾನ್ಯ ಮೀಸಲಾತಿಯಲ್ಲಿ ಮುಚಿರಡ್ಕ ಮನೆಯ ರಮೇಶ್, ನಾಗನಡ್ಕ ಮನೆಯ ಸುಂದರ ಗೌಡ, ಉಮ್ಮಾಂತಿಮಾರ್‌ನ ಕೆ ಸುನೀಲ್ ಗೋಖಲೆ, ಇನ್ನೆರಡು ಸ್ಥಾನ ಕಾಯ್ದಿರಿಸಲಾಗಿದೆ.

ಇವರೇ ಅಧ್ಯಕ್ಷರ ಆಯ್ಕೆ ಮಾಡಬೇಕಿತ್ತು
ನನ್ನ ಅಧ್ಯಕ್ಷತೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ ಕುರಿತಂತೆ ಸಭೆ ನಡೆದಿತ್ತು. ೭ ಸದಸ್ಯರ ನೇಮಕವೂ ಆಗಿತ್ತು. ಈ ೭ ಸದಸ್ಯರು ಚರ್ಚಿಸಿ ತಮ್ಮೊಳಗೆ ಅಧ್ಯಕ್ಷರ ಆಯ್ಕೆ ಮಾಡಬಹುದಿತ್ತು. ಇವರು ಉಳಿದ ಎರಡು ಸ್ಥಾನದ ಭರ್ತಿಗಾಗಿ ಕಾದು ಕುಳಿತಿದ್ದಾರೆ. ಸಮಿತಿ ರಚನೆಯಾಗಿ ಆರು ತಿಂಗಳಾಯಿತು. ಒಂದು ವೇಳೆ ಇವರು ಅಧ್ಯಕ್ಷರ ನೇಮಕ ಮಾಡಿರುತ್ತಿದ್ದರೆ ಜಾತ್ರೆಯು ವ್ಯವಸ್ಥಾಪನಾ ಸಮಿತಿಯ ಮುಂದಾಳತ್ವದಲ್ಲಿ ಆಗುತ್ತಿತ್ತು. ಇನ್ನು ಮುಂದಿನ ಸಭೆವರೆಗೆ ಕಾಯಬೇಕು.
-ಮಲ್ಲಿಕಾ ಪಕ್ಕಳ, ಸದಸ್ಯರು ರಾಜ್ಯ ಧಾರ್ಮಿಕ ಪರಿಷತ್

ಸದಸ್ಯರ ಸಂಖ್ಯೆಯಲ್ಲಿ ಗೊಂದಲ ಇದೆ
ದತ್ತಿ ಇಲಾಖೆಯಿಂದ ಸಮಿತಿ ರಚನೆ ಮಾಡುವಂತೆ ಆದೇಶ ಬಂದಿದೆ. ಅದರ ಜೊತೆ ೭ ಸದಸ್ಯರ ಹೆಸರನ್ನೂ ನೀಡಿದ್ದಾರೆ. ಆದರೆ ಸಮಿತಿ ರಚನೆಗೆ ೯ ಸದಸ್ಯರು ಬೇಕು. ಈ ಬಗ್ಗೆ ಗೊಂದಲ ಇದೆ. ಮತ್ತೆ ಇಲಾಖೆ ಜೊತೆ ಚರ್ಚಿಸಿ ಅವರು ತೆಗೆದುಕೊಂಡ ನಿರ್ಣಯದಂತೆ ಕ್ರಮ ಕೈಗೊಳ್ಳುತ್ತೇನೆ.
-ದಿನೇಶ್, ಆಡಳಿತಾಧಿಕಾರಿ ಶಿಶಿಲೇಶ್ವರ ದೇವಸ್ಥಾನ

Exit mobile version