Site icon Suddi Belthangady

ಬಳಂಜ ಬಿಲ್ಲವ ಸಂಘದಲ್ಲಿ ಧತ್ತಿನಿಧಿಯಿಂದ ಪುಸ್ತಕ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಬಳಂಜ: ವಿದ್ಯೆಯೆಂಬ ಶಕ್ತಿ ನಮ್ಮೊಳಗಿದ್ದಾಗ ಆತ್ಮವಿಶ್ವಾಸ ಹೆಚ್ಚಾಗಿ ಸರಿಯಾದ ಗುರಿ ತಲುಪಲು ಸಾಧ್ಯವಿದೆ. ಜನರಲ್ಲಿ ಜಾಗೃತಿ ಮೂಡಿ,ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದಾಗ ಸಮಾಜದ ಬದಲಾವಣೆ ಸಾಧ್ಯ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಅವರು ಹೇಳಿದರು. ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ಮತ್ತು ಮಹಿಳಾ ಬಿಲ್ಲವ ವೇದಿಕೆ ನೇತೃತ್ವದಲ್ಲಿ, ಸಂಘದ ಧತ್ತಿನಿಧಿ ಯೋಜನೆಯಡಿ ನೀಡಲ್ಪಡುವ ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ಜೂ.8ರಂದು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಮೂಲಕ ಕೇರಳದಲ್ಲಿ ಕ್ರಾಂತಿ ಮಾಡಿ ಸಾಕ್ಷರತೆಯ ನಾಡನ್ನಾಗಿ ಪರಿವರ್ತಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಅದ್ಬುತ ಚಿಂತನೆ, ದೂರದೃಷ್ಟಿ ಸಾರ್ವಕಾಲಿಕವಾದುದು. ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಉನ್ನತಿ ಪಡೆಯುತ್ತದೆ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್. ಎಸ್., ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿ, ಪ್ರವೀಣ್ ಕುಮಾರ್ ಹೆಚ್‌. ಎಸ್. ಸ್ವಾಗತಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಧತ್ತಿನಿಧಿ ಯೋಜನೆಯಿಂದ ನೀಡಲ್ಪಡುವ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಿಯುಸಿ ಹಾಗೂ ಎಸ್.ಎಸ್.ಎಲ್‌.ಸಿ ಸಾಧನೆಗೈದ ವಿದ್ಯಾರ್ಥಿಗಳಾದ ಮೌಲ್ಯ ಕಾಪಿನಡ್ಕ, ಸುಜ್ಞಾ ಅಶ್ವಥಪಲಿಕೆ, ರಿತಿಕಾ ಪೂಜಾರಿ ಬಳಂಜ, ರಮ್ಯ ಬಳಂಜರವರನ್ನು ಸನ್ಮಾನಿಸಲಾಯಿತು. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಸ್ತಾಂತರಿಸಲಾಯಿತು. ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ನೀರಿನ ಬಾಟಲಿ ನೀಡಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.

ಸುದೀರ್ಘ 46 ವರ್ಷಗಳ ಭವ್ಯ ಪರಂಪರೆಯಿರುವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಸಮಾಜಕ್ಕೆ ನೀಡಿದ ವಿಶೇಷ ಸೇವೆಗಾಗಿ ಈ ಬಾರಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ. ಸುಮಾರು ಎರಡೂವರೆ ದಶಕಗಳ ಹಿಂದೆ ಹಿರಿಯರಾದ ಹೆಚ್.ಧರ್ಣಪ್ಪ ಪೂಜಾರಿ, ವಸಂತ ಸಾಲಿಯಾನ್, ನೋಣಯ್ಯ ಪೂಜಾರಿಯವರ ನೇತೃತ್ವದಲ್ಲಿ ಅಲ್ಲಿಂತ್ಯಾರು ಶ್ರೀಧರ ಪೂಜಾರಿಯವರು ಅವರ ತಾಯಿಯ ಹೆಸರಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆ ಉಳಿಯಬಾರದು ಎಂಬ ಸದುದ್ದೇಶದಿಂದ ಸಂಘದ ಧತ್ತಿನಿಧಿ ಯೋಜನೆಗೆ ಮೊತ್ತ ನೀಡಿ ಆ ಮೂಲಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಸಮಾಜದ ಬಂಧುಗಳು ಸ್ವರ್ಗಸ್ಥರಾದರೆ ಅವರ ನೆನಪಿಗಾಗಿ ಅವರ ಕುಟುಂಬಿಕರು ಶೈಕ್ಷಣಿಕ ಶಕ್ತಿ ನೀಡುವ ಮೂಲಕ ಅವರ ಹೆಸರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಕೈಜೋಡಿಸುತ್ತಿದ್ದಾರೆ. ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು ಸದಸ್ಯರು ಸಹಕರಿಸಿದರು.ಶಿಕ್ಷಕಿ ವಿಶಾಲ ಜಗದೀಶ್ ನಿರೂಪಿಸಿ, ವಂದಿಸಿದರು.

Exit mobile version