ಉಜಿರೆ: ಖಾಸಗಿ ಪದವಿ ಪೂರ್ವ ಕಾಲೇಜಿನ ಎದುರು ಓಮ್ನಿ ಕಾರೊಂದಕ್ಕೆ ಡಿಕ್ಕಿಯಾಗುವ ಸಾಧ್ಯತೆ ತಪ್ಪಿಸಲು ಹೋಗಿ ಕಾರೊಂದು ಕಾಂಪೌಂಡ್ ಗೆ ಗುದ್ದಿ ಮಗುಚಿ ಬಿದ್ದ ಘಟನೆ ಜೂ.9ರಂದು ನಡೆದಿದೆ. ಓಡಲ ನಿವಾಸಿ ವರುಣ್ (20ವ) ಎಂಬವರು ಸಿದ್ಧವನ ಕಡೆಯಿಂದ ಉಜಿರೆಗೆ ಕಾರಿನಲ್ಲಿ ಆಗಮಿಸುತ್ತಿದ್ದ ವೇಳೆ ಉಜಿರೆಯ ಎಸ್.ಡಿ.ಎಂ ಪಿಯು ಕಾಲೇಜಿನ ಮುಂಭಾಗ ಪಕ್ಕದ ರಸ್ತೆಯಿಂದ ಓಮ್ನಿ ಒಳನುಗ್ಗಿತ್ತು. ಏಕಾಏಕಿ ಇದನ್ನು ತಪ್ಪಿಸಲು ಕಾರು ಎಡಗಡೆಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಫುಟ್ಪಾತ್ ಮೇಲೇರಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ. ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಾಲಕ ವರುಣ್ ಗೆ ಪ್ರಾಥಮಿಕ ಚಿಕಿತ್ಸೆ ನಡೆಯುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು, ಕಾರು ಜಖಂಗೊಂಡಿರುವ ರೀತಿಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.